ದಾವಣಗೆರೆ, ಡಿ.12- ಎಸ್.ಎಸ್. ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಶಿಶು ಮತ್ತು ಮಕ್ಕಳ ಹೃದಯ ಆರೈಕೆಯ ಅತ್ಯಾಧುನಿಕ ಸೇವೆಗಳನ್ನು ಆರಂಭ ಮಾಡಿರುವುದಾಗಿ ವ್ಯವಸ್ಥಾಪಕ ನಿರ್ದೇಶಕ ಸುನೀಲ್ ಭಂಡಾರಿಗಲ್ ಹೇಳಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ನಾರಾಯಣ ಹೃದಯಾಲಯದ ಹಿರಿಯ ಹೃದ್ರೋಗ ಶಸ್ತ್ರ ಚಿಕಿತ್ಸಾ ಸಲಹಾ ತಜ್ಞ ಡಾ.ರವಿವರ್ಮ ಪಾಟೀಲ್ ಅವರನ್ನು ಹೊಸ ವಿಭಾಗದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ ಎಂದು ತಿಳಿಸಿದರು.
ಡಾ.ರವಿ ವರ್ಮ ಮಾತನಾಡಿ, ಪ್ರತಿ ವರ್ಷ 2 ಲಕ್ಷ ಮಕ್ಕಳು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಮಕ್ಕಳ ಹೃದ್ರೋಗ ಆರೈಕೆ ಕ್ಷೇತ್ರವು ಅತ್ಯಂತ ವಿಶೇಷ ನೈಪುಣ್ಯದ ಕ್ಷೇತ್ರವಾಗಿದ್ದು, ದಾವಣಗೆರೆ ಭಾಗಕ್ಕೆ ಅನಿವಾರ್ಯವೂ ಆಗಿತ್ತು ಎಂದರು.
ಹೃದಯ ತಜ್ಞ ಡಾ.ಧನಂಜಯ ಮಾತನಾಡಿ, ಹೃದಯ ತೊಂದರೆ ಅತಿ ಸೂಕ್ಷ್ಮದ್ದಾಗಿದ್ದು, ನವಜಾತ ಶಿಶುಗಳಿಂದ ಹತ್ತು ವರ್ಷದ ಮಕ್ಕಳಾದರೂ ಕೆಲವರಿಗೆ ಹೃದಯ ಸಂಬಂಧಿ ಕಾಯಿಲೆ ಗೊತ್ತಾಗುವುದಿಲ್ಲ. ನಂತರ ತಿಳಿದಾಗ ಸ್ಕ್ರೀನಿಂಗ್ ಮೂಲಕ ಪತ್ತೆ ಹಚ್ಚಿ ಶಸ್ತ್ರ ಚಿಕಿತ್ಸೆ ಮಾಡಬೇಕಾಗುತ್ತದೆ.
ದಾವಣಗೆರೆಯಲ್ಲಿನ ನೂತನ ವಿಭಾಗ ಸ್ಥಳೀಯರಿಗೆ ಸಹಕಾರಿ ಎಂದರು. ಮಾರ್ಕೆಟಿಂಗ್ ವಿಭಾಗದ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.