ಹರಪನಹಳ್ಳಿ, ಡಿ.13- ಸರ್ಕಾರಿ ನೌಕರರೆಂದು ಪರಿಗಣಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸಾರಿಗೆ ನೌಕರರ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯ ಡಿಪೋದಿಂದ 15 ರಿಂದ 18 ಲಕ್ಷ ರು. ನಷ್ಟ ಸಂಭವಿಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಇಲ್ಲಿಯ ಡಿಪೋ ವ್ಯವಸ್ಥಾಪಕ ವಿನಾಯಕ ಅವರು ಪ್ರತಿ ದಿನ 5-6 ಲಕ್ಷ ರು. ಗಳು ಸಂಗ್ರಹವಾಗುತ್ತಿತ್ತು, ಕಳೆದ ಮೂರು ದಿನಗಳಲ್ಲಿ ಅಂದಾಜು 15-18 ಲಕ್ಷ ರು. ನಷ್ಟ ಸಂಭವಿಸಿದೆ ಎಂದು ಹೇಳಿದ್ದಾರೆ.
ನಾವು ನೌಕರರ ಮನವೊಲಿಸಲು ಪ್ರಯತ್ನಿಸುತ್ತಲೇ ಇದ್ದೇವೆ, ಆದರೆ ನೌಕರರು ಕರ್ತವ್ಯಕ್ಕೆ ಬರುತ್ತಾ ಇಲ್ಲ ಎಂದು ಹೇಳಿದರು. ಭಾನುವಾರ ಸಹ ಡಿಪೋದಿಂದ ಒಂದೂ ಬಸ್ಸು ಹೊರಗಡೆ ಹೋಗಿಲ್ಲ ಎಂದು ಅವರು ಸ್ಪಷ್ಟ ಪಡಿಸಿದರು.
ಬಸ್ ನಿಲ್ದಾಣ ಬಸ್ಸುಗಳಿಲ್ಲದೆ ಬಿಕೋ ಎನ್ನುತ್ತಿದ್ದು, ಖಾಸಗಿ ಬಸ್ಸು ಹಾಗೂ ಇತರೆ ವಾಹನಗಳಿಗೆ ಭಾರೀ ಬೇಡಿಕೆ ಬಂದಿದೆ.