ದಾವಣಗೆರೆ, ಡಿ. 10 – ಅಧಿಕಾರಕ್ಕೆ ಬಂದರೆ ಗೋಹತ್ಯೆ ತಡೆ ಮಸೂದೆ ರದ್ದುಗೊಳಿಸುತ್ತೇವೆ ಎಂದು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿರುವುದು ಹತಾಶೆ ಎಂದು ಬಣ್ಣಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಅವರ ಸರ್ಕಾರ ಅಧಿಕಾರಕ್ಕೆ ಬಂದರೆ ತಾನೇ ರದ್ದುಗೊಳಿಸುವುದು ಎಂದು ಪ್ರಶ್ನಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲೆಂದು ಇಂದು ಸಂಜೆ ನಗರಕ್ಕಾಗಮಿಸಿದ್ದ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗ ಆ ಮಾತು ಹೇಳಲಿ. ಇನ್ನೂ ಎರಡೂವರೆ ವರ್ಷ ಕಾಲ ಬಿಜೆಪಿ ಸರ್ಕಾರಕ್ಕೆ ಅಧಿಕಾರವಿದೆ. ಸುಭದ್ರವಾದ ಸರ್ಕಾರ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ಯಶಸ್ವಿಯಾಗಿ ಗೋಹತ್ಯೆ ನಿಯಂತ್ರಣ ಮಸೂದೆ ಜಾರಿಗೊಳಿಸಿದೆ. ಗೋವು ದೇವರ ಸಮಾನ, ಜನರು ಇದನ್ನು ಸ್ವಾಗತ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿರುವ ಬಸವರಾಜ, ಗೋಹತ್ಯೆ ತಡೆ ಮಸೂದೆ ವಿರೋಧಿಸಿ ಕಾಂಗ್ರೆಸ್ ಸಭಾತ್ಯಾಗ ಮಾಡಿರುವುದು ಅವರ ನಿಲುವನ್ನು ತೋರಿಸುತ್ತದೆ. ಜೆಡಿಎಸ್‌ನ ಕೆಲ ಶಾಸಕರ ಮಿತ್ರರು ಗೋಹತ್ಯೆ ತಡೆ ಮಸೂದೆಗೆ ಬೆಂಬಲಿಸಿದ್ದಾರೆ. ಅದನ್ನು ಸ್ವಾಗತಿಸುತ್ತೇವೆ. ಬೆಂಬಲಿಸಿದ ಶಾಸಕರಿಗೆ ಧನ್ಯವಾದ ಸಲ್ಲಿಸುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಜತೆ ಹೋಗಿ ಜೆಡಿಎಸ್‌ನವರು ಕೈಸುಟ್ಟುಕೊಂಡಿದ್ದಾರೆ. ಅವರಿಗೂ ಕಾಂಗ್ರೆಸ್ ಸ್ನೇಹದ ಏನು ಎಂಬುದು ಅರಿವಾಗಿದೆ. ಮುಂದಿನ ದಿನಗಳಲ್ಲಿ ಏನಾಗುತ್ತದೆ ಕಾದು ನೋಡೋಣ ಎಂದವರು ಇದೇ ಸಂದರ್ಭದಲ್ಲಿ ಹೇಳಿದ್ದಾರೆ.