ದಾವಣಗೆರೆ, ಡಿ.7- ಪಿಂಜಾರ, ನದಾಫ್ ಸಮುದಾಯಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಪಿಂಜಾರ ಅಭಿವೃದ್ಧಿ ನಿಗಮ ರಚಿಸಬೇಕೆಂದು ಕರ್ನಾಟಕ ಪಿಂಜಾರ್, ನದಾಫ್, ಮನ್ಸೂರಿ ಸಂಘಗಳ ಮಹಾಮಂಡಳದ ರಾಜ್ಯಾಧ್ಯಕ್ಷ ಅಬ್ದುಲ್ ರಝಾಕ್ ನದಾಫ್ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಅಂದಾಜು 30 ಲಕ್ಷ ಜನಸಂಖ್ಯೆ ಹೊಂದಿರುವ ಮುಸ್ಲಿಂ ಸಮುದಾಯದಲ್ಲಿ ಶೇ.50 ರಷ್ಟು ಪಿಂಜಾರ, ನದಾಫ್ ವರ್ಗಕ್ಕೆ ಸೇರಿದವರಿದ್ದಾರೆ. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ ಹಾಗೂ ರಾಜಕೀಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಹಿಂದುಳಿದಿರುವ ನಮ್ಮ ಸಮುದಾಯದವರ ಏಳಿಗೆಗಾಗಿ ಪಿಂಜಾರ ಅಭಿವೃದ್ಧಿ ನಿಗಮ ರಚಿಸಬೇಕೆಂದು ಒತ್ತಾಯಿಸಿದ ಹಿನ್ನೆಲೆಯಲ್ಲಿ ಫೆಬ್ರವರಿಯಲ್ಲಿ ಬಜೆಟ್ ಪೂರ್ವಭಾವಿ ಸಭೆಗೆ ಮುಖ್ಯಮಂತ್ರಿ ಯಡಿಯೂರಪ್ಪ ನಮ್ಮನ್ನು ಆಹ್ವಾನಿಸಿ ನಮ್ಮ ಅಹವಾಲು ಸ್ವೀಕರಿಸಿ ನಿಗಮ ರಚಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಎಂಟು ತಿಂಗಳಾದರೂ ನಮ್ಮ ಬೇಡಿಕೆ ಈಡೇರಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
2009ರಲ್ಲಿ ಸಿ.ಎಸ್. ದ್ವಾರಕನಾಥ್ ಅಧ್ಯಕ್ಷತೆಯ ಹಿಂದುಳಿದ ವರ್ಗಗಳ ಆಯೋಗವು ನದಾಫ್, ಪಿಂಜಾರ ಸಮುದಾಯದ ಸ್ಥಿತಿಗತಿ ಅಧ್ಯಯನ ನಡೆಸಿ, ಅಭಿವೃದ್ಧಿ ನಿಗಮ ರಚಿಸಲು ಶಿಫಾರಸ್ಸು ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. ಆದರೆ, ಇಲ್ಲಿವರೆಗೂ ಆಡಳಿತ ನಡೆಸಿರುವ ಯಾವುದೇ ಸರ್ಕಾರಗಳು ವರದಿ ಶಿಫಾರಸ್ಸು ಅನುಷ್ಠಾನ ಗೊಳಿಸಿಲ್ಲ ಎಂದು ಆಪಾದಿಸಿದರು.
ಗಾದೆ, ದಿಂಬು, ಹಾಸಿಗೆ ಉತ್ಪಾದನೆಯು ನದಾಫ್, ಪಿಂಜಾರರ ಕುಲ ಕಸುಬು ಆಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕುರ್ಲಾನ್, ಸ್ಲೀಪ್ ವೆಲ್ ಸೇರಿದಂತೆ ಇತರೆ ಬೃಹತ್ ಕಂಪನಿಗಳು ಇವುಗಳ ಉತ್ಪಾದನೆಯಲ್ಲಿ ತೊಡಗಿರು ವುದರಿಂದ ನಮ್ಮ ಕುಲ ಕಸುಬು ನಶಿಸಿ ಹೋಗುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರ ನಮ್ಮ ಸಮುದಾಯದ ಅಭಿ ವೃದ್ಧಿಗಾಗಿ ಪಿಂಜಾರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಎಲ್ಲಾ ತಾಲ್ಲೂಕುಗಳಲ್ಲೂ ನದಾಫ್, ಪಿಂಜಾರ ಸಮುದಾಯದವರಿಗೆ ಪ್ರವರ್ಗ-1 ರ ಜಾತಿ ಪ್ರಮಾಣ ಪತ್ರ ನೀಡುವಂತೆ ತಹಶೀಲ್ದಾರ್ಗಳಿಗೆ ನಿರ್ದೇ ಶನ ನೀಡಬೇಕು. ಪ್ರತಿ ಜಿಲ್ಲಾ ಕೇಂದ್ರ ಗಳಲ್ಲಿ ಸಮಾಜದ ವಿದ್ಯಾರ್ಥಿನಿ ಯರಿಗಾಗಿ ವಸತಿ ನಿಲಯ ನಿರ್ಮಾಣ ಮಾಡಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಹಾಮಂಡಳದ ಮಧ್ಯ ಕರ್ನಾಟಕದ ಅಧ್ಯಕ್ಷ ಎಂ.ರಾಜಸಾಬ್, ಶಫಿವುಲ್ಲಾ, ಮುಮ್ತಾಜ್ ಬೇಗಂ, ಮುದ್ದಾಪುರ ರೆಹಮಾನ್, ನೌಷಿನ್ ತಾಜ್ ಮತ್ತಿತರರು ಹಾಜರಿದ್ದರು.