ಮಾತು ಕೂಡಿಸಬೇಕೆ ವಿನಃ ಒಡೆಯಬಾರದು : ರಂಭಾಪುರಿ ಶ್ರೀ

ಮಾತು ಕೂಡಿಸಬೇಕೆ ವಿನಃ ಒಡೆಯಬಾರದು : ರಂಭಾಪುರಿ ಶ್ರೀ - Janathavaniರಂಭಾಪುರಿ ಪೀಠ, ಡಿ.7- ಮಾತಿನಲ್ಲಿ ಅದ್ಭುತ ಶಕ್ತಿಯಿದೆ. ಮಾತು ಒಡೆಯಬಲ್ಲದು, ಒಟ್ಟಿಗೆ ಕೂಡಿಸಲು ಬಲ್ಲದು. ಮನುಷ್ಯನಿಗೆ ಮಾತೆಂಬುದು ಭಗವಂತ ನೀಡಿದ ವರಪ್ರಸಾದ. ಮಾತು ಕೂಡಿಸಬೇಕೆ ವಿನಃ ಒಡೆಯುವ ಕೆಲಸ ಮಾಡಬಾರದೆಂದು  ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಅವರು ಶ್ರೀ ರಂಭಾಪುರಿ ಪೀಠದಲ್ಲಿ ಕಾರ್ತಿಕ ಸಹಸ್ರ ದೀಪೋತ್ಸವ ಹಾಗೂ ಶ್ರೀ ವೀರಭದ್ರಸ್ವಾಮಿ ರಥೋತ್ಸವದ ಅಂಗವಾಗಿ ಜರುಗಿದ ಧರ್ಮ ಜಾಗೃತಿ ಸಮಾರಂಭದಲ್ಲಿ ಆಶೀರ್ವಚನ ನೀಡುತ್ತಿದ್ದರು.

ಧರ್ಮದ ಮಾರ್ಗದಲ್ಲಿ ಸಂಯಮ, ಶಿಸ್ತು, ಅನುಶಾಸನಗಳಿಗೆ ಬಹಳ ಮಹತ್ವವಿದೆ. ಈ ಮೌಲ್ಯಕ್ಕೆ ಸಂಬಂಧಿಸಿದ ಪ್ರಧಾನ ಸೂತ್ರಗಳು ಹತ್ತು. ಅವುಗಳೇ ಅಹಿಂಸಾದಿ ಧ್ಯಾನ ಪರ್ಯಂತರ ದಶ ಧರ್ಮ ಸೂತ್ರಗಳು. ಸ್ವಸ್ಥ ಸಮಾಜದಲ್ಲಿ ಇವು ಪ್ರಭಾತದಲ್ಲಿ ಸೂರ್ಯ ಕಿರಣದಂತೆ ಹರಡುತ್ತಲೇ ಇರುತ್ತವೆ. ಸಂಸ್ಕಾರವಂತ ಕುಟುಂಬಗಳಲ್ಲಿ ಇಂದಿಗೂ ಧರ್ಮಶ್ರದ್ಧೆ, ದೇವತಾ ಭಕ್ತಿ ಮತ್ತು ದೇಶಾಭಿಮಾನ ಇರುವುದನ್ನು ಕಾಣುತ್ತೇವೆ. ಮಾತು ಮಾಣಿಕ್ಯ, ಮಾತು ಮುತ್ತು, ಮಾತು ಜ್ಯೋತಿರ್ಲಿಂಗ ಎಂಬುದನ್ನು ನೆನಪಿಸಿಕೊಳ್ಳಬೇಕಾಗಿದೆ. ಯಾರು ದುರ್ಜನರು ಎಂಬುದು ನಮಗೆ ಮನದಟ್ಟಾ ಗುತ್ತದೆಯೋ ಅಂಥವರಿಂದ ದೂರ ಸರಿಯುವುದು ಸೂಕ್ತ. ದುರ್ಜನರೊಂದಿಗೆ ಸರಸವೂ ಬೇಡ, ವಿರಸವೂ ಬೇಡ. ಅಂಥವರಿಂದ ದೂರ ಸರಿಯುವುದು ಶ್ರೇಯಸ್ಕರ. ಕತ್ತಲೆಯನ್ನು ಕಳೆಯುವ ಶಕ್ತಿ ದೀಪಕ್ಕೆ ಇರುವಂತೆ, ಅಜ್ಞಾನದ ಕತ್ತಲೆ ಕಳೆಯುವ ಶಕ್ತಿ ಗುರುವಿಗೆ ಇದೆ ಎಂದರು.

ಕಾರ್ತಿಕ ದೀಪೋತ್ಸವ ಸಮಾರಂಭದಲ್ಲಿ ಸಂಗೊಳ್ಳಿ ಹಿರೇಮಠದ ಗುರುಲಿಂಗ ಶಿವಾಚಾರ್ಯರು, ರಾಜೇಶ್ವರದ ಘನಲಿಂಗ ರುದ್ರಮುನಿ ಶಿವಾಚಾರ್ಯರು, ಬೊಮ್ಮನಹಳ್ಳಿ ಸಿದ್ಧಲಿಂಗ ದೇವರು, ದಾನಯ್ಯ ದೇವರು, ಬೆಂಗಳೂರಿನ ಗುರುಪಾದಯ್ಯ ಹಿರೇಮಠ ಮತ್ತಿತರರು ಪಾಲ್ಗೊಂಡಿದ್ದರು.

error: Content is protected !!