ಎಸ್‌ಟಿ ಸೌಲಭ್ಯಕ್ಕಾಗಿ ಬೆಂಗಳೂರಿಗೆ ಪಾದಯಾತ್ರೆ

ಎಸ್‌ಟಿ ಸೌಲಭ್ಯಕ್ಕಾಗಿ ಬೆಂಗಳೂರಿಗೆ ಪಾದಯಾತ್ರೆ - Janathavaniದಾವಣಗೆರೆ, ಡಿ. 5 – ಕುರುಬ ಸಮಾಜ ಈಗಾಗಲೇ ಎಸ್‌ಟಿಯಲ್ಲಿದೆ. ಕೊಡಗು ಸೇರಿದಂತೆ ಕೆಲ ಜಿಲ್ಲೆಗಳಲ್ಲಿ ಸಮುದಾಯ ದವರು ಪಡೆಯುತ್ತಿರುವ ಮೀಸಲಾತಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸುವಂತೆ ಪಾದಯಾತ್ರೆ ನಡೆಸುವುದಾಗಿ ಕಾಗಿನೆಲೆಯ ಕನಕ ಪೀಠದ ಜಗದ್ಗುರು ಶ್ರೀ ನಿರಂಜನಾ ನಂದಪುರಿ ಸ್ವಾಮೀಜಿ ತಿಳಿಸಿದ್ದಾರೆ.

ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ವತಿಯಿಂದ ನಗರದ ಶ್ರೀ ಬೀರೇಶ್ವರ ಭವನದಲ್ಲಿ ಆಯೋಜಿಸ ಲಾಗಿದ್ದ ಕುರುಬರ ಎಸ್‌ಟಿ ಮೀಸಲಾತಿ ಹೋರಾಟದ ಪೂರ್ವ ಭಾವಿ ಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡುತ್ತಿದ್ದರು. ಕೊಡಗು ಕುರುಬರು ಈಗಾಗಲೇ ಎಸ್‌ಟಿ ಪಟ್ಟಿಯಲ್ಲಿ ದ್ದಾರೆ. ಬೀದರ್, ಕಲಬುರಗಿ ಹಾಗೂ ಯಾದಗಿರಿಗಳಲ್ಲಿ ಕುರುಬರೇ ಆಗಿರುವ ಗೊಂಡ – ರಾಜಗೊಂಡ ಮುಂತಾದವರು ಮೀಸಲಾತಿ ಪಡೆಯುತ್ತಿದ್ದಾರೆ. ಅದನ್ನೇ ಇಡೀ ರಾಜ್ಯಕ್ಕೆ ವಿಸ್ತರಿಸು ವಂತೆ ನಾವು ಕೇಳುತ್ತಿದ್ದೇವೆ ಎಂದರು. ಈ ಮೀಸಲಾತಿಗಾಗಿ ಬರುವ ಜನವರಿ 15ರಿಂದ ಕಾಗಿನೆಲೆಯಿಂದ ಬೆಂಗಳೂರಿಗೆ ಪಾದಯಾತ್ರೆಯನ್ನು ಕೈಗೊಳ್ಳುತ್ತೇವೆ. ಇದರ ಆಯೋಜನೆಗಾಗಿ ಪೂರ್ವಭಾವಿ ಸಭೆಗಳನ್ನು ನಡೆಸುತ್ತಿರುವುದಾಗಿ ಶ್ರೀಗಳು ತಿಳಿಸಿದರು.

ಕಲಬುರಗಿ, ಯಾದಗಿರಿ ಹಾಗೂ ಬೀದರ್‌ಗಳಲ್ಲಿ ಕುರುಬ ಸಮುದಾಯದವರಿಗೆ ಈಗಾಗಲೇ ಎಸ್‌ಟಿ ಮೀಸಲಾತಿ ದೊರೆಯುತ್ತಿದೆ. ಜನಾಂದೋಲನ ನಡೆದಲ್ಲಿ ಅಖಂಡ ಕರ್ನಾಟಕದ ಕುರುಬರಿಗೆ ಈ ಸೌಲಭ್ಯ ಸಿಗಲಿದೆ ಎಂದವರು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಎಸ್‌ಟಿ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ಎಂ. ಸತೀಶ್, ನಾಯಕ ಹಾಗೂ ಕುರುಬ ಸಮುದಾಯಗಳನ್ನು ಶೈಕ್ಷಣಿಕ ಸೌಲಭ್ಯಕ್ಕಾಗಿ ಎಸ್.ಟಿ.ಗೆ 1984ರಲ್ಲೇ ಸೇರ್ಪಡೆ ಮಾಡಲಾಗಿತ್ತು. ನಾಯಕ ಸಮುದಾಯದವರು ಹೋರಾಟದಿಂದ ಎಸ್.ಟಿ.ಯಲ್ಲೇ ಮುಂದುವರೆದರು. ಆದರೆ, ಆ ಸಂದರ್ಭದಲ್ಲಿ ಕುರುಬರು ಹೋರಾಟ ನಡೆಸದ ಹಾಗೂ ಕನಕ ಗುರುಪೀಠ ಆ ಸಂದರ್ಭದಲ್ಲಿ ಇರದಿದ್ದ ಕಾರಣ ಸೌಲಭ್ಯ ಸಿಗಲಿಲ್ಲ ಎಂದು ವಿಷಾದಿಸಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಕಾಗಿನೆಲೆ ಶ್ರೀಗಳ ಪಾದಯಾತ್ರೆ ರಾಜ್ಯದಲ್ಲೇ ಹೆಸರು ಮಾಡಲಿದ್ದು, ಸಂಘಟನೆ ಸಹಕಾರಿಯಾಗಲಿದೆ. ಎಸ್‌ಟಿ ಹೋರಾಟ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಪಾದಯಾತ್ರೆ ನಗರಕ್ಕೆ ಬಂದಾಗ ಹಬ್ಬದ ವಾತಾವರಣ ಮೂಡಿಸಬೇಕು ಎಂದು ಕರೆ ನೀಡಿದರು.

ಸಮಾಜದ ಮುಖಂಡರಾದ ಮಂಜುನಾಥ್, ಜಿ.ಪಂ. ಸದಸ್ಯ ಜೆ.ಸಿ.ಲಿಂಗಪ್ಪ, ಬಿ.ಹೆಚ್. ಪರಶುರಾಮ್, ಕುಣಿಬೆಳಕೆರೆ ದೇವೇಂದ್ರಪ್ಪ, ರಾಜು, ಕುಂಬಳೂರು ವಿರೂಪಾಕ್ಷಪ್ಪ ಮತ್ತಿತರರು ಮಾತನಾಡಿ, ಶ್ರೀಗಳ ನೇತೃತ್ವದ ಪಾದಯಾತ್ರೆ ಯಶಸ್ವಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದರು.

ವೇದಿಕೆಯ ಮೇಲೆ ಸಮಾಜದ ಮುಖಂಡರಾದ ಸುನಂದಮ್ಮ ಪರಶುರಾಮಪ್ಪ, ಕುಂದೂರು ವಿರೂಪಾಕ್ಷಪ್ಪ, ಗೋಣೆಪ್ಪ, ಬಿ.ಟಿ. ರಮೇಶ್, ಡಿ.ಹೆಚ್. ಪರಶುರಾಮಪ್ಪ, ಗುರುನಾಥ, ಚನ್ನಪ್ಪ, ಹರಪನಹಳ್ಳಿ ಜಿ.ಪಂ. ಕ್ಷೇತ್ರದ ಸದಸ್ಯ ಬಿ.ಹೆಚ್. ಪರಶುರಾಮಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!