ಸ್ಮಾರ್ಟ್ ಸಿಟಿಯಿಂದ ಬೆಂಕಿ ನಂದಿಸುವ ಫೋಮಿಂಗ್‌ ವಾಹನ

ನೀರಿಗಿಂತ ನಾಲ್ಕು ಪಟ್ಟು ಹೆಚ್ಚು ಕ್ಷಮತೆ

– ಬಸವಪ್ರಭು ಶರ್ಮ ಅಗ್ನಿಶಾಮಕ ಅಧಿಕಾರಿ

ದಾವಣಗೆರೆ, ಡಿ. 4 – ಸ್ಮಾರ್ಟ್ ಸಿಟಿ ಯೋಜನೆಯಡಿ ಸುಮಾರು 1 ಕೋಟಿ ರೂ.ಗಳ ವೆಚ್ಚದ ಬೆಂಕಿ ನಂದಿಸುವ ಸಲಕರಣೆಗಳನ್ನು ಅಗ್ನಿಶಾಮಕ ದಳಕ್ಕೆ ಪೂರೈಸಲಾಗುತ್ತಿದ್ದು, ಇದರಲ್ಲಿ ಫೋಮಿಂಗ್ ವಾಹನ ಸಹ ಸೇರಿದೆ ಎಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವಪ್ರಭು ಶರ್ಮ ತಿಳಿಸಿದ್ದಾರೆ.

ಸಾಮಾನ್ಯ ಅಗ್ನಿಶಾಮಕ ವಿಧಾನದಲ್ಲಿ 20 ಸಾವಿರ ಲೀಟರ್‌ನಿಂದ ಆಗುವ ಪರಿಣಾಮ, ಫೋಮ್ ಮೂಲಕ ಕೇವಲ 5 ಸಾವಿರ ಲೀಟರ್‌ನಿಂದ ಆಗುತ್ತದೆ ಎಂದವರು ವಿವರಿಸಿದ್ದಾರೆ.

ಪ್ರಸಕ್ತ ನೀರು ಹಾಗೂ ಫೋಮ್ ಪ್ರತ್ಯೇಕವಾಗಿರುತ್ತವೆ. ಅಗತ್ಯವಾದ ಸಂದರ್ಭದಲ್ಲಿ ಫೋಮ್ ಯಂತ್ರವನ್ನು ಅಳವಡಿಕೆ ಮಾಡಿಕೊಳ್ಳಬೇಕಾಗುತ್ತದೆ. ಸ್ಮಾರ್ಟ್ ಸಿಟಿ ಪೂರೈಸಲಿರುವ ಯಂತ್ರ ಫೋಮ್ ಸಿದ್ಧವಾಗಿಯೇ ಬರುತ್ತದೆ. ಇದರಲ್ಲಿ 500 ಲೀಟರ್‌ನಷ್ಟು ಫೋಮ್ ಇರುತ್ತದೆ ಎಂದವರು ಹೇಳಿದ್ದಾರೆ.

ಈ ಬಗ್ಗೆ ವಿವರ ನೀಡಿರುವ ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ಶುಕ್ರವಾರದಂದು 13.5 ಲಕ್ಷ ರೂ.ಗಳ ಬೆಂಕಿ ನಂದಿಸುವ ಉಪಕರಣಗಳನ್ನು  ಅಗ್ನಿಶಾಮಕ ದಳಕ್ಕೆ ನೀಡಲಾಗಿದೆ. ಇನ್ನೊಂದು ತಿಂಗಳಲ್ಲಿ ಫೋಮಿಂಗ್ ವಾಹನ ಸೇರಿದಂತೆ ಒಟ್ಟು 1 ಕೋಟಿ ರೂ. ಮೌಲ್ಯದ ಉಪಕರಣಗಳನ್ನು ನೀಡಲಾಗುವುದು ಎಂದು ಹೇಳಿದ್ದಾರೆ. ಒಂದು ಬೊಲೆರೋ ಜೀಪ್, ಹೆಚ್ಚಿನ ಪ್ರಮಾಣದಲ್ಲಿ ನೀರು ಸೆಳೆಯುವ ಮೂಲಕ ಪ್ರವಾಹದಲ್ಲಿ ನೆರವಾಗುವ ಹಾಗೂ ಬೆಂಕಿ ನಂದಿಸಲು ಉಪಯುಕ್ತವಾಗಿರುವ 4 ಪೋರ್ಟಬಲ್ ಪೆಟ್ರೋಲ್ ಪಂಪ್, ರೆಸ್ಕ್ಯೂ ಸಾ, ಹತ್ತು ಉನ್ನತ ಟಾರ್ಚ್‌ಗಳು ಹಾಗೂ 20 ಫೈರ್‌ ಬೀಟರ್‌ಗಳನ್ನು ಅಗ್ನಿಶಾಮಕ ದಳಕ್ಕೆ ಶುಕ್ರವಾರ ಸಚಿವ ಭೈರತಿ ಬಸವರಾಜ್ ಅವರು ಹಸ್ತಾಂತರಿಸಿದ್ದಾರೆ.

error: Content is protected !!