ದಾವಣಗೆರೆ, ಡಿ.5- ಕಾಡುಗೊಲ್ಲ ಜನಾಂ ಗದ ಅಭಿವೃದ್ಧಿ ನಿಗಮವನ್ನು ಹೆಸರಿಗೆ ಮಾತ್ರ ಸ್ಥಾಪಿಸಿದ್ದು, ನಿಗಮಕ್ಕೆ ಅನುದಾನ ನೀಡದೇ ರಾಜ್ಯ ಸರ್ಕಾರವು ಕಾಡುಗೊಲ್ಲ ಜನಾಂಗವನ್ನು ಕಡೆಗಣಿಸಿದೆ ಎಂದು ಕರ್ನಾಟಕ ರಾಜ್ಯ ಕಾಡು ಗೊಲ್ಲರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಸಿ. ಶಿವು ಯಾದವ್ ಆರೋಪಿಸಿದರು.
ಶಿರಾ ಉಪ ಚುನಾವಣೆಯ ಕಾರಣ ತರಾತುರಿಯಲ್ಲಿ ಕಾಡುಗೊಲ್ಲ ಜನಾಂಗದ ಅಭಿವೃದ್ಧಿ ನಿಗಮವನ್ನು ಹೆಸರಿಗೆ ಮಾತ್ರ ಸ್ಥಾಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅದಕ್ಕೆ ಅಧ್ಯಕ್ಷರು, ಪದಾಧಿಕಾರಿಗಳ ನೇಮಕ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ. ಅಲ್ಲದೇ ಬೇರೆ ಸಮಾಜದ ನಿಗಮವನ್ನು ಘೋಷಿಸಿ ತಕ್ಷಣ ಅನುದಾನ ಮಂಜೂರು ಮಾಡಿದಂತೆ ಕಾಡುಗೊಲ್ಲ ಜನಾಂಗದ ನಿಗಮಕ್ಕೆ ಅನುದಾನ ನೀಡಿಲ್ಲ ಎಂದು ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಕಾಡುಗೊಲ್ಲ ಸಮಾಜವನ್ನು ಪ್ರತಿನಿಧಿಸುವ ಒಬ್ಬ ಶಾಸಕ, ವಿಧಾನ ಪರಿಷತ್ ಸದಸ್ಯರು ಇಲ್ಲ. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ 2014ರಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿತ್ತು. ಬಳಿಕ ಈ ಬಗ್ಗೆ ತಿಳಿದಿಲ್ಲ ಎಂದರು.
ನಾಳೆ ದಿನಾಂಕ 6ರ ಭಾನುವಾರ ಯಾದವ ಸಮಾಜದ ಮುಖಂಡ ಡಿ.ಟಿ. ಶ್ರೀನಿವಾಸ್ ಕರೆದಿ ರುವ ಸಭೆಗೂ ಕಾಡುಗೊಲ್ಲರ ಕ್ಷೇಮಾಭಿವೃದ್ಧಿ ಸಂಘಕ್ಕೂ ಯಾವುದೇ ಸಂಬಂಧವಿಲ್ಲ ಎಂದರು.
ಸಂಘದ ಮಾರ್ಗದರ್ಶಕ ಮಲ್ಲಿಕಾರ್ಜುನ ಕಲಮರಹಳ್ಳಿ ಮಾತನಾಡಿ, ಕಾಡುಗೊಲ್ಲರು ಅಚ್ಚ ಕನ್ನಡದ ಬುಡಕಟ್ಟು ಸಮುದಾಯ. ಯಾದವ ಗೊಲ್ಲರೇ ಬೇರೆ, ಕಾಡುಗೊಲ್ಲರೇ ಬೇರೆ. ಎಲ್ಲವೂ ಒಂದೇ ಎಂದು ಯಾದವ ಸಮಾಜದ ಮುಖಂಡರು ಗೊಂದಲ ಸೃಷ್ಟಿಸುತ್ತಿದ್ದಾರೆ. ಸಮುದಾಯವನ್ನು ಎಸ್‌ಟಿಗೆ ಸೇರಿಸಲು ಅಡ್ಡಿಪಡಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಎಸ್. ತಿಮ್ಮಯ್ಯ, ಎಸ್.ಎನ್. ಗಂಗಾಧರಪ್ಪ, ಶೇಷಪ್ಪ, ಪ್ರವೀಣ್, ಪ್ರಕಾಶ್ ಇದ್ದರು.