ದಾವಣಗೆರೆ, ಡಿ.5- ಊರ ನಾಯಕರು ಹಾಗೂ ಮ್ಯಾಸ ನಾಯಕರು ಒಂದೇ ಸಮಾಜವಾಗಿದ್ದು, ಯಾವುದೇ ವ್ಯತ್ಯಾಸವಿಲ್ಲ. ರಾಜನಹಳ್ಳಿ ಶ್ರೀಗಳು ಸಮಗ್ರ ನಾಯಕ ಸಮಾಜದ ಗುರುಗಳಾಗಿದ್ದು, ಕೆಲವರು ತಮ್ಮ ಸ್ವಾರ್ಥದ ಲಾಭಕ್ಕಾಗಿ ಸಮಾಜ ವಿಭಾಗ ಮಾಡಿ ಸೌಹಾರ್ದತೆ ಕದಡುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ನಾಯಕ ಸಮಾಜದ ಅಧ್ಯಕ್ಷ ವೀರಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಪರಿಶಿಷ್ಟ ಪಂಗಡಕ್ಕೆ ಸೇರಿರುವ ವಾಲ್ಮೀಕಿ ನಾಯಕ ಸಮಾಜವು ಬುಡಕಟ್ಟು ಹಿನ್ನೆಲೆ ಹೊಂದಿದ್ದು, ಊರ ನಾಯಕರು ಮತ್ತು ಮ್ಯಾಸ ನಾಯಕರು ಎರಡೂ ಒಂದೇ ಆಗಿವೆ. ನಾವು ಪರಸ್ಪರ ಸಂಬಂಧವನ್ನೂ ಬೆಳೆಸುತ್ತೇವೆ. ಹೀಗಿರುವಾಗ ಸಮುದಾಯದ ಒಗ್ಗಟ್ಟನ್ನು ಮುರಿಯಲು ಕೆಲವರು ಕಾನೂನು ಬಾಹಿರವಾಗಿ ಸಮುದಾಯದ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಸಮಸ್ಯೆಗಳಿದ್ದರೆ ರಾಜನಹಳ್ಳಿ ಶ್ರೀಗಳೊಂದಿಗೆ ಚರ್ಚಿಸಿ, ಪರಿಹರಿಸಿಕೊಳ್ಳಲಿ. ಅದನ್ನು ಬಿಟ್ಟು ಊರ ನಾಯಕರು, ಮ್ಯಾಸ ನಾಯಕರು ಎಂಬುದಾಗಿ ಸಮು ದಾಯದಲ್ಲಿ ಒಡಕು ತರುವುದನ್ನು ಮುಂದುವರೆಸಿದರೆ ಸಮಾಜದಿಂದಲೇ ಬಹಿಷ್ಕರಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.
ಈಗಾಗಲೇ ದೊಡ್ಡಮನಿ ಪ್ರಸಾದ್ ಎಂಬು ವರ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಇಂತಹವರ ಕುತಂತ್ರಕ್ಕೆ ಸಮಾಜದವರು ಬಲಿಯಾಗಬಾರದೆಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್.ಎಂ. ಆಂಜನೇಯ, ಗುಮ್ಮನೂರು ಮಲ್ಲಿಕಾರ್ಜುನ್, ಹೂವಿನಮಡು ಚಂದ್ರಪ್ಪ, ಶ್ರೀನಿವಾಸ ದಾಸಕರಿಯಪ್ಪ, ಕೆ.ಹೆಚ್. ಓಬಳಪ್ಪ, ಫಣಿಯಾಪುರ ಲಿಂಗರಾಜ್, ಮಲ್ಲಾಪುರ ದೇವರಾಜ್ ಇದ್ದರು.