ತಾಲ್ಲೂಕು ಕ.ಸಾ.ಪ. ಜಾಲತಾಣದ ‘ಕನ್ನಡ ನುಡಿ ಹಬ್ಬ’ದ ಸಮಾರೋಪದಲ್ಲಿ ಡಾ. ಎಂ.ಜಿ. ಈಶ್ವರಪ್ಪ
ದಾವಣಗೆರೆ, ಡಿ. 3 – ಮಧ್ಯ ಕರ್ನಾಟಕ ಕನ್ನಡದ ಸೊಗಡಿನ ಜಾಗವಾಗಲು ಕಾರಣವಾದವರು ಕವಿ ಮಹಲಿಂಗರಂಗ ಎಂದಿರುವ ಜಾನಪದ ತಜ್ಞ ಡಾ. ಎಂ.ಜಿ. ಈಶ್ವರಪ್ಪ, ಸುಲಿದ ಬಾಳೆಯ ಹಣ್ಣಿನಂದದಿ ಇರುವ ಕನ್ನಡದ ಮೂಲಕವೇ ಆತ್ಮಜ್ಞಾನದ ಸಿದ್ಧಾಂತ ತಿಳಿಸಲು ಸಾಧ್ಯ ಎಂಬುದನ್ನು ಅವರು ತೋರಿಸಿದ್ದರು ಎಂದು ಅಭಿಪ್ರಾಯ ಪಟ್ಟಿದ್ದಾರೆ.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಾಲ ತಾಣದ ಮೂಲಕ ಆಯೋಜಿಸಲಾಗಿದ್ದ §ಕನ್ನಡ ನುಡಿ ಹಬ್ಬ¬ದ ಕಾರ್ಯಕ್ರಮದಲ್ಲಿ ಅವರು ಸಮಾರೋಪ ಭಾಷಣ ಮಾಡಿದರು.
ಮಹಲಿಂಗರಂಗ ಅವರು ಸಂಸ್ಕೃತದಿಂದ ಮಾತ್ರ ಆತ್ಮಜ್ಞಾನ ಸಿದ್ಧಾಂತ ಹೇಳಲು ಸಾಧ್ಯ ಎಂಬ ಕಲ್ಪನೆಯನ್ನು ಒಡೆದು ಕನ್ನಡದ ಹಿರಿಮೆ ತಿಳಿಸಿದರು ಎಂದರು. §ಸುಲಿದ ಬಾಳೆಯ ಹಣ್ಣಿನಂದದಿ ಕಳೆದ ಸಿಗುರಿನ ಕಬ್ಬಿನಂದದಿ ಅಳಿದ ಉಷ್ಣದ ಹಾಲಿನಂದದಿ ಸುಲಭವಾಗಿರ್ಪ ಲಲಿತವಹ ಕನ್ನಡದ ನುಡಿಯಲಿ ತಿಳಿದು ತನ್ನೊಳು ತನ್ನ ಮೋಕ್ಷವ ಗಳಿಸಿಕೊಂಡೊಡೆ ಸಾಲದೇ¬ ಎಂದು ಮಹಲಿಂಗರಂಗ ಹೇಳಿದ ಮಾತಿನಲ್ಲಿ, ಕನ್ನಡದ ನುಡಿಯಲಿ ತನ್ನ ತಿಳಿದು ಮೋಕ್ಷವ ಗಳಿಸಿಕೊಳ್ಳಬೇಕು ಎಂಬ ಸಂದೇಶವಿದೆ ಎಂದರು.
ಬಸವಣ್ಣನವರು ಸರಳವಾಗಿ ಕನ್ನಡದಲ್ಲಿ ಹೇಳಿದ್ದು, ನಂತರದಲ್ಲಿ ಮತ್ತೆ ಸಂಸ್ಕೃತದ ಕಡೆ ವಾಲಿತ್ತು. ಆಗ ಮಹಲಿಂಗರಂಗರ §ಅನುಭಾವಾಮೃತ¬ ಕೃತಿಯ ಮೂಲಕ ನಾಡಿನ ಅದ್ವೈತ ಸಿದ್ಧಾಂತವನ್ನು ತಿಳಿಗನ್ನಡದಲ್ಲಿ ಸುಂದರವಾಗಿ ಹೇಳಲು ಸಾಧ್ಯ ಎಂಬುದನ್ನು ತೋರಿಸಿದರು ಎಂದು ಈಶ್ವರಪ್ಪ ಹೇಳಿದರು.
ಕನ್ನಡಕ್ಕೆ 2,500 ವರ್ಷಗಳ ಪರಂಪರೆ ಇದೆ. ಪಂಪ, ಜನ್ನ ಹಾಗೂ ಪೊನ್ನತ್ರಯರಿಂದ ಹಿಡಿದು, ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾ ದೇವಿ ಮುಂತಾದ ಶರಣರು, ಪುರಂದರ ದಾಸ, ಕನಕದಾಸ ಮುಂತಾದ ದಾಸರು, ಮಹಾಭಾರತ – ರಾಮಾಯಣಗಳನ್ನು ಕನ್ನಡಕ್ಕೆ ತಂದ ಕುಮಾರವ್ಯಾಸ, ಲಕ್ಷ್ಮೀಶರಂಥವರಿಂದ ಹಿಡಿದು ಕನ್ನಡಕ್ಕೆ ಎಂಟು ಜ್ಞಾನಪೀಠ ತಂದವವರೆಲ್ಲರೂ ಕನ್ನಡದ ಘನತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಹೆಚ್ಚಿಸಿದ್ದಾರೆ ಎಂದರು.
§ಕುವೆಂಪು ಅವರ ವಿಚಾರ ಕ್ರಾಂತಿ¬ ಎಂಬ ವಿಷಯ ಕುರಿತು ಮಾತನಾಡಿದ ಹಿರಿಯ ಪತ್ರ ಕರ್ತ ಬಿ.ಎನ್. ಮಲ್ಲೇಶ್, ಕುವೆಂಪು ಸಾಹಿತ್ಯದ ಜೊತೆ ಅವರು ಕಟ್ಟಿಕೊಟ್ಟ ವೈಚಾರಿಕ ನಿಲುವು ಗಳು ಮುಖ್ಯವಾಗಿವೆ. ಮೂಢನಂಬಿಕೆ ಹಾಗೂ ಅಂಧ ಶ್ರದ್ಧೆಗಳ ವಿರುದ್ದ ಅವರು ಸಾಹಿತ್ಯದ ಮೂಲಕ ಎತ್ತಿರುವ ಧ್ವನಿ ಅಭಿನಂದನಾರ್ಹ ಎಂದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಮ ಸಮಾಜ ಕಟ್ಟುವ ಪ್ರಯತ್ನ ಮಾಡಿದರು. ಅಂತಹ ಶರಣರ ಮುಂದುವರಿದ ಭಾಗವಾಗಿ ಕುವೆಂಪು ಅವರು ಜಾತಿ ವಿನಾಶಕ್ಕೆ ನಾಂದಿ ಹಾಡಿದರು. ಕುವೆಂಪು ಜಾತಿ ಮೋಹದಿಂದ ಹೊರ ಬಂದು, ಎಲ್ಲರಿಗೂ ಅದೇ ಸಂದೇಶ ನೀಡಿದರು. ಮನುಷ್ಯನನ್ನು ವಿಶ್ವಮಾನವ ಮಟ್ಟಕ್ಕೆ ಏರಿಸಿದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಡಯಟ್ ಉಪನಿರ್ದೇಶಕ (ಅಭಿವೃದ್ಧಿ) ಹೆಚ್.ಕೆ. ಲಿಂಗರಾಜು, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಒಂದು ತಿಂಗಳು ಆನ್‌ಲೈನ್ ಡಿಂಡಿಮ ಬಾರಿಸುವಲ್ಲಿ ಯಶಸ್ವಿಯಾಗಿರುವುದು ಮೆರುಗು ಎಂದು ಹೇಳಿದರು.
ಶೇ.25ರಷ್ಟು ಜನ ನೇರವಾಗಿ ಒಂದು ತಿಂಗಳ ಕಾರ್ಯಕ್ರಮ ವೀಕ್ಷಿಸಿದ್ದರೆ, ಶೇ.75 ನಂತರದಲ್ಲಿ ನೋಡಿದ್ದಾರೆ. ಹೊರನಾಡು, ವಿದೇಶದಿಂದಲೂ ಜನರು ವೀಕ್ಷಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ. ವಾಮದೇವಪ್ಪ, ಒಂದು ತಿಂಗಳ ಕಾಲ ನಡೆದ ಜಾಲತಾಣದ ಕಾರ್ಯಕ್ರಮದಲ್ಲಿ ಶಿಕ್ಷಣ, ಸಾಹಿತ್ಯ, ಕಲಾ, ಹಳೆಗನ್ನಡ, ನಡು ಗನ್ನಡ, ಆಧುನಿಕ, ವೈದ್ಯಕೀಯ, ಕೃಷಿ ಕೆಲವು ಪ್ರಾಕಾರ ಗಳನ್ನು ಪ್ರೇಕ್ಷಕರಿಗೆ ತಲುಪಿಸಲಾಗಿದೆ ಎಂದರು.
ತಾಲ್ಲೂಕು ಸಾಹಿತ್ಯ ಪರಿಷತ್ ನಿರ್ದೇಶಕ ಕೆ. ರಾಘವೇಂದ್ರ ನಾಯರಿ ಸ್ವಾಗತಿಸಿದರು.