ವಾಟ್ಸಪ್ ಗುಂಪಿನಲ್ಲಿ ಕದಳಿ ಮಹಿಳಾ ವೇದಿಕೆಯ ದತ್ತಿ ಉಪನ್ಯಾಸ

ವಾಟ್ಸಪ್ ಗುಂಪಿನಲ್ಲಿ ಕದಳಿ ಮಹಿಳಾ ವೇದಿಕೆಯ ದತ್ತಿ ಉಪನ್ಯಾಸ - Janathavaniದಾವಣಗೆರೆ, ನ.28- ಜಿಲ್ಲಾ ಕದಳಿ ಮಹಿಳಾ ವೇದಿಕೆಯಿಂದ 119ನೇ ಕಮ್ಮಟದಲ್ಲಿ ದತ್ತಿ ಉಪನ್ಯಾಸ, 65ನೇ ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ಕದಳಿ ವೇದಿಕೆಯ ಸದಸ್ಯರ ವಾಟ್ಸಾಪ್ ಗುಂಪಿನಲ್ಲಿ ಆಚರಿಸಲಾಯಿತು. 

ಭೀಮಸಮುದ್ರದ ಲಿಂ. ಹಾಲಮ್ಮ ಮತ್ತು ಲಿಂ. ಮಲ್ಲಿಕಾರ್ಜುನಪ್ಪ ದತ್ತಿ, ಜಗಳೂರಿನ ಗೌಡ್ರ ಲಿಂ. ಕಾಳಮ್ಮ ಮತ್ತು ಲಿಂ. ಗೌಡ್ರ ತೊರಿಯಪ್ಪ ದತ್ತಿ ಹಾಗೂ ಜಗಳೂರಿನ ಲಿಂ. ಶಾರದಮ್ಮ ಮತ್ತು ಲಿಂ. ಟಿ. ಲಿಂಗಪ್ಪ ದತ್ತಿಗಳನ್ನು ಏರ್ಪಡಿಸಲಾಗಿತ್ತು. 

ದೊಡ್ಡ ಬಾತಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಶ್ರೀಮತಿ ಶೋಭಾ ಎಂ.ಶಿರಳ್ಳಿ ಅವರು `ಕನ್ನಡ ಸಾಹಿತ್ಯಕ್ಕೆ ಶರಣರ ಕೊಡುಗೆ’ ಎಂಬ ವಿಷಯದ ಕುರಿತು  ಮಾತಾಡಿದರು. ವಿಶ್ವದ ಯಾವುದೇ ಭಾಷೆಯಲ್ಲಿ ಒಂದೇ ಕಾಲಘಟ್ಟದಲ್ಲಿ ನೂರಾರು ಶರಣ ಶರಣೆಯರು ಸಾವಿರಾರು ವಚನಗಳನ್ನು ಆಡುಭಾಷೆ ಯಲ್ಲಿ ರಚಿಸಿ, ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಉದಾಹರಣೆ ಇಲ್ಲ ಹಾಗೂ ಕನ್ನಡ ಸಾಹಿತ್ಯ ಶರಣರ ವಚನಗಳಿಂದ ಸಂಪದ್ಭರಿತವಾಗಿದೆ ಎಂದರು. 

ಸಿ.ಜಿ. ಆಸ್ಪತ್ರೆಯ ನರ್ಸಿಂಗ್ ಅಧಿಕಾರಿ   ಶ್ರೀಮತಿ ಶಾಂತಮ್ಮ ಅವರು `ಕೊರೊನಾದಿಂದಾಗಿ ಮಕ್ಕಳ ಮನಸ್ಥಿತಿ’ ಎಂಬ ವಿಷಯದ ಕುರಿತು ಮಾತನಾಡಿದರು.  ಜಗತ್ತಿನಾದ್ಯಂತ ಎಲ್ಲಾ ಮಕ್ಕಳ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದು, ಆಟ-ಪಾಠ ಸರಿಯಾಗಿ ಆಗದೇ ಮನೆಯೊಳಗೇ ಕುಳಿತು ತುಂಬಾ ಕಷ್ಟ ಅನುಭವಿಸುತ್ತಿದ್ದಾರೆ. ಪೋಷಕರು ಅವರೊಡನೆ ಬೆರೆತು ಉತ್ತಮ ದಾರಿ ತೋರಿಸಿ, ಒಳ್ಳೆಯ ಹವ್ಯಾಸಗಳನ್ನು ಕಲಿಸಬೇಕು ಎಂದರು. 

ಸಹ ಕಾರ್ಯದರ್ಶಿ ವಿಜಯಲಕ್ಷ್ಮಿ ಬಸವರಾಜ್, ಕನ್ನಡದ ಇತಿಹಾಸ ಮತ್ತು ಬೆಳವಣಿಗೆ ಬಗ್ಗೆ ವಿವರಣೆ ನೀಡುತ್ತಾ ನಿರೂಪಣೆ ಮಾಡಿದರು. 

ಸರಸ್ವತಿ ತಂಡದವರು ಪ್ರಾರ್ಥಿಸಿದರು. ಪೂರ್ಣಿಮಾ ಮರಬನಹಳ್ಳಿ ಹಾಗೂ ರೇಖಾ ಓಂಕಾರಪ್ಪ ಮತ್ತು ತಂಡದವರು ಕನ್ನಡದ ಹಾಡುಗಳನ್ನು ಹಾಡಿದರು. ಕಾರ್ಯದರ್ಶಿ ಮಮತಾ ನಾಗರಾಜ್‌ ಸಣ್ಣಪುಟ್ಟ ವ್ಯವಹಾರಗಳಲ್ಲಿ ಕನ್ನಡವನ್ನು ಬಳಸಿ ಎಂದು ಪ್ರಾಸ್ತಾವಿಕವಾಗಿ ಹೇಳಿ   ಸ್ವಾಗತಿಸಿದರು. ಖಜಾಂಚಿ ವಿಜಯ ಚಂದ್ರಶೇಖರ್ ದತ್ತಿ ಹಾಗೂ ಉಪನ್ಯಾಸಕರ ಪರಿಚಯ ಮಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ  ಕದಳಿ ವೇದಿಕೆ ಅಧ್ಯಕ್ಷರಾದ ಪಲ್ಲವಿ ಪಾಟೀಲ್‌ ಮಾತನಾಡಿ, ದೇಶ-ವಿದೇಶಗಳಲ್ಲಿರುವವರು ಕನ್ನಡ ಕಲಿಯುತ್ತಾರೆ, ಕನ್ನಡ ಕಾರ್ಯಕ್ರಮ ಮಾಡುತ್ತಾರೆ, ನಾವು ಇಲ್ಲಿರುವವರು ಕನ್ನಡವನ್ನು ಉಳಿಸಲು ಹೋರಾಡಬೇಕಾಗಿದೆ ಎಂದರು. 

ಕದಳಿ ವೇದಿಕೆಯಿಂದ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ – ಬಿ.ಜಿ.ಗೀತಾ, ದ್ವಿತೀಯ ಸ್ಥಾನ – ಮಮತಾ ರಾಧಾಕೃಷ್ಣ, ತೃತೀಯ ಸ್ಥಾನ – ಕೋಮಲ ವಸಂತ್‌ಕುಮಾರ್ ಪಡೆದಿದ್ದಾರೆ ಎಂದು ಅವರು ಫಲಿತಾಂಶವನ್ನು ಪ್ರಕಟಿಸಿದರು. 

ವೇದಿಕೆಯ ಗೌರವಾಧ್ಯಕ್ಷರಾದ ಶ್ರೀಮತಿ ಜಯಶೀಲಾ ಹೆಚ್.ಎನ್. ಷಡಾಕ್ಷರಪ್ಪ ಅವರು ಹಾಗೂ ವೇದಿಕೆಯ ಪದಾಧಿಕಾರಿಗಳು ಕಾರ್ಯಕ್ರಮ ವೀಕ್ಷಿಸಿದರು.

error: Content is protected !!