ದಾವಣಗೆರೆ, ನ.28- ಸಂಸ್ಕೃತಿ ಎನ್ನುವುದು ಇಡೀ ಒಂದು ಜನಾಂಗದ ಜೀವನ ವಿಧಾನವನ್ನು ಒಳಗೊಂಡಿರುತ್ತದೆ. ಕನ್ನಡ ಸಂಸ್ಕೃತಿಗೆ 2500 ವರ್ಷಗಳಷ್ಟು ವೈಭ ವದ ಇತಿಹಾಸವಿದೆ. ಬಾದಾಮಿ ಚಾಲುಕ್ಯರ ದೊರೆ ವಿಜಯಾದಿತ್ಯನು ಪಲ್ಲವರನ್ನು ಸೋಲಿಸಿ, ಕಂಚಿಯನ್ನು ವಶಪಡಿಸಿಕೊಂಡರೂ ಅಲ್ಲಿನ ಜನಜೀವನವನ್ನು ಗೌರವಿಸಿ, ಅದನ್ನು ನಾಶಪಡಿಸದೇ ಹಾಗೆ ಬಿಟ್ಟಿದ್ದು, ನಮ್ಮ ಕನ್ನಡ ಸಂಸ್ಕೃತಿಯು ಉದಾರತೆಯನ್ನುಳ್ಳದ್ದೆಂಬುದು ಹೆಮ್ಮೆಯ ವಿಷಯವೇ ಸರಿ ಎಂದು ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಶ್ರೀಮತಿ ಎಸ್.ಎಂ. ಗೌರಮ್ಮ ತಿಳಿಸಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿರುವ ಕನ್ನಡ ನುಡಿ ಹಬ್ಬ ಕಾರ್ಯ ಕ್ರಮದಲ್ಲಿ 27 ನೇ ದಿನದಂದು `ಕನ್ನಡ ಸಂಸ್ಕೃತಿ ನಮ್ಮ ಹೆಮ್ಮೆ’ ಎಂಬ ವಿಷಯದ ಕುರಿತಾಗಿ ಅವರು ಉಪನ್ಯಾಸ ನೀಡಿದರು.
ನಾಗರಿಕತೆ ಮತ್ತು ಸಂಸ್ಕೃತಿಗಳು ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ನಾಗರಿಕ ತೆಯು ಮನುಷ್ಯನ ಬದಲಾವಣೆ ಸೂಚಿಸಿದರೆ, ಸಂಸ್ಕೃತಿಯು ಮನುಷ್ಯನ ವೈಚಾರಿಕ ಬದಲಾ ವಣೆ, ಆಂತರಿಕ ಬದಲಾವಣೆ ಸೂಚಿಸುವ ಪದವಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಕೃತಿಯನ್ನು ನೋಡುವು ದಾದರೆ ಜನತೆಯ ಮೌಲ್ಯ, ಸಾಹಿತ್ಯ, ರಾಜಕೀಯ ಪದ್ಧತಿ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಉದ್ಯೋಗ, ಆರ್ಥಿಕ ಸ್ಥಿತಿಗತಿ, ಕಾನೂನು, ಆಚರಣೆ ಇತ್ಯಾದಿಗಳೆಲ್ಲ ವನ್ನೂ ಒಳಗೊಂಡ ಹಾಗೆ. ಸಂಸ್ಕೃತಿಯನ್ನು ನಾವು ಅರ್ಥಮಾಡಿಕೊಳ್ಳ ಬೇಕು. ಈ ಹಿನ್ನೆಲೆಯಲ್ಲಿ ಕರ್ನಾಟಕದ ಸಂಸ್ಕೃತಿ ಅತ್ಯಂತ ವೈಭವಯುತವಾದದ್ದು, ಹೆಮ್ಮೆಪಡುವಂತಹ ದ್ದಾಗಿದೆ. ಕನ್ನಡ ಸಂಸ್ಕೃತಿಗೆ ಶಿಲಾನ್ಯಾಸ ಮಾಡಿದ್ದು ಮಯೂರ ಶರ್ಮ. ಆ ವ್ಯಕ್ತಿಯ ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಅದಕ್ಕೆ ಉತ್ತರ ನೀಡಲು ಪ್ರಯತ್ನಿಸಿದ ಪ್ರಯತ್ನವೇ ಕದಂಬ ಮನೆತನದ ಆರಂಭ.
ಕದಂಬ ವಂಶದ ಸ್ಥಾಪನೆಯ ಮೂಲಕ ಮೊಟ್ಟಮೊದಲಿಗೆ ಕನ್ನಡದ ಮನೆತನವೇ ಕನ್ನಡಿಗರನ್ನು ಆಳುವುದು ಶುರುವಾಯಿತು. ಈ ಮೂಲಕ ಕನ್ನಡ ಭಾಷೆ, ಸಂಸ್ಕೃತಿ ಮುಡಿಗೆ ಪ್ರಾಮುಖ್ಯತೆ ದೊರೆಯಿತು ಎಂದು ತಿಳಿಸಿದರು.
ಕ್ರಿಸ್ತ ಶಕ 856 ರಲ್ಲಿ ಶ್ರೀವಿಜಯ ತನ್ನ ಕೃತಿ ಕವಿರಾಜಮಾರ್ಗದಲ್ಲಿ ಕನ್ನಡಿಗರನ್ನು ವರ್ಣಿ ಸುತ್ತಾ ಕನ್ನಡಿಗರು ಸುಬಟರು, ಕವಿಗಳು, ಚೆಲುವರು, ಅಭಿಮಾನಿಗಳು, ಅತ್ಯುಗ್ರರು, ಗಂಭೀರ ಚಿತ್ತರು, ವಿವೇಕಿಗಳು ಎಂದು ಹೇಳುತ್ತಾ, `ಕುರಿತೋದದೆಯಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್’ ಎಂಬ ಅವರ ಈ ಮಾತುಗಳಲ್ಲಿ ನಮ್ಮ ಕನ್ನಡ ಜನ ಹೇಗೆ ಬದುಕಿದ್ದರು ಎಂದು ತಿಳಿಯುತ್ತದೆ ಎಂದು ತಿಳಿಸಿದರು.
ಹಾಗೆಯೇ ಕಪ್ಪೆ ಆರ್ಯಭಟನ ಶಾಸ ನವು ‘ಕನ್ನಡಿಗರು ಒಳ್ಳೆಯವರಿಗೆ ಒಳ್ಳೆಯವರು ಕೆಟ್ಟವರಿಗೆ ಅಷ್ಟೇ ಕೆಟ್ಟವರು’ ಎಂದು ಹೇಳಿರುವುದು ಕಂಡುಬರುತ್ತದೆ. ಕನ್ನಡಿಗರ ಇಂತಹ ಶೌರ್ಯವನ್ನು ಗುಣ ಸ್ವಭಾವವನ್ನು ತಿಳಿಸುವಂತಹ ಶಿಲಾಶಾಸನಗಳು, ಸಾಹಿತ್ಯ ಆಧಾರಗಳು ಕನ್ನಡ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ಎನ್ನುವುದನ್ನು ಸಾರಿ ಸಾರಿ ಹೇಳುತ್ತವೆ.
ಪಂಪನು ತನ್ನ ಕಾವ್ಯದಲ್ಲಿ ಹೇಳುವಂತೆ ಕನ್ನಡನಾಡಿನಲ್ಲಿ ಕನ್ನಡ ನಾಡಿನ ಒಂದು ಭಾಗವಾದ ಬನವಾಸಿ ದೇಶದಲ್ಲಿ ಸಂಸ್ಕೃತಿ ಸಂಪನ್ನನಾಗಿ ಗುಣವಂತ ಮನುಷ್ಯನಾಗಿ ನನಗೆ ಹುಟ್ಟಲಿಕ್ಕೆ ಅವಕಾಶ ದೊರೆಯದೇ ಹೋದರೂ ಸಹ ಅಲ್ಲಿ ನಾನು ಮರಿದುಂಬಿ ಯಾಗಿಯಾದರೂ, ಕೋಗಿಲೆಯಾಗಿ ಯಾದರೂ ಹುಟ್ಟಲಿಕ್ಕೆ ಬಯಸುತ್ತೇನೆ ಎನ್ನುವ ಪಂಪನ ಮಾತು ನಮ್ಮ ನಾಡಿನ ಬಗೆಗಿನ ಅಭಿಮಾನವನ್ನು ತೋರಿಸುತ್ತದೆ. ಇದು ನಮ್ಮ ಭಾಷೆ ನಾಡಿನ ಹೆಮ್ಮೆ ಎಂದು ತಿಳಿಸಿದರು.
ಸುಲಿದ ಬಾಳೆಯ ಹಣ್ಣಿನಂದದಿ, ಸಿಬಿ ರೊಡೆದ ಕಬ್ಬಿನಂದದಿ, ಉಷ್ಣವಡೆದ ಹಾಲಿನಂ ದದಿ, ಇಂತಹ ಮಧುರವಾದ, ಸಮೃದ್ಧವಾದ ಭಾಷೆ ಕನ್ನಡ ಇರುವಾಗ ಸಂಸ್ಕೃತದ ಹಂಗೇಕೆ ? ಎನ್ನುವ ಪ್ರಶ್ನೆ ಮಹಾಲಿಂಗರಂಗ ರದ್ದು. ಕನ್ನಡ ನಾಡು-ನುಡಿಯಲ್ಲೇ ಎಲ್ಲವೂ ಇರುವಾಗ ಪರಭಾಷೆಯ ಹಂಗೇಕೆ? ಎನ್ನುವ ಪ್ರಶ್ನೆ ಕನ್ನಡ ನುಡಿಯ ಬಗೆಗಿನ ಅಭಿಮಾನವನ್ನು ಇಲ್ಲಿ ಕಾಣುವುದಕ್ಕೆ ಸಾಧ್ಯ.
`ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪವೃಕ್ಷ ವಾಗುತ್ತದೆ. ಕನ್ನಡಕ್ಕಾಗಿ ಧ್ವನಿಯೆತ್ತು ನಿನ್ನ ಧ್ವನಿ ಪಾಂಚಜನ್ಯವಾಗುತ್ತದೆ. ಕನ್ನಡಕ್ಕಾಗಿ ಕಿರುಬೆರ ಳೆತ್ತಿದರೂ ಗೋವರ್ಧನಗಿರಿಯಾ ಗುತ್ತದೆ’ ಎಂಬ ಕುವೆಂಪುರವರು ಹೇಳಿರುವುದನ್ನು ಸ್ಮರಿಸುತ್ತಾ, ಇಂದು ಕರ್ನಾಟಕದ ಶಾಲೆಗಳಲ್ಲಿ ಕನ್ನಡವನ್ನು ಕಡ್ಡಾಯವಾಗಿ ಕಲಿಯಲೇ ಬೇಕಿಲ್ಲ. ಆಂಗ್ಲ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ಬೇಕಾದರೆ ಕಲಿಯಬಹುದು, ಬೇಡವಾದರೆ ಬಿಡಬಹುದು ಎನ್ನುವಂತಹ ಸ್ಥಿತಿ ಇರುವಂತಹದ್ದು ಇವತ್ತು ನಮ್ಮ ನಾಡು, ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದೆ ಎಂಬ ಎಚ್ಚರಿಕೆಯನ್ನೂ ನೀಡುತ್ತಿದೆ. ಕನ್ನಡ ಭಾಷೆ ಧರ್ಮ ಸಹಿಷ್ಣುತೆ ಹೊಂದಿದ ಭಾಷೆ. ಇಲ್ಲಿ ಎಲ್ಲಾ ಧರ್ಮಗಳಿಗೂ, ಕಲೆ, ವಾಸ್ತುಶಿಲ್ಪ, ಸಾಹಿತ್ಯ-ಸಂಗೀತಕ್ಕೂ ಸಮಾನ ಅವಕಾಶವನ್ನು ನೀಡಲಾಗಿತ್ತು. ಹಾಗೆಯೇ ಸ್ತ್ರೀಯರಿಗೂ ದೊರೆತ ಸಮಾನತೆಯು ನಮ್ಮ ಕನ್ನಡ ಸಂಸ್ಕೃತಿಯ ಹೆಮ್ಮೆ ಎನ್ನುವುದು ಅಭಿನಂದನೀಯ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ, ಶಾಸ್ತ್ರೀಯ ಸ್ಥಾನಮಾನ ಹೊಂದಿರುವ ನಮ್ಮ ಭಾಷೆಯು ವಿಶ್ವದ ಎಲ್ಲಾ ಭಾಷೆಗಳಿಗೆ ರಾಣಿಯಂತೆ ಕಂಗೊಳಿಸುತ್ತಿರುವ ಭಾಷೆ ನಮ್ಮ ಕನ್ನಡ ಭಾಷೆ. ನಮ್ಮ ಕನ್ನಡ ನಮ್ಮ ಹೆಮ್ಮೆ ಎಂದು ಹೇಳಿದರು.
ಶ್ರೀಮತಿ ಎಂ.ಜಿ. ಸುಧಾ, ಹೆಚ್. ವಿ. ವಾಮದೇವಪ್ಪ ಸ್ವಾಗತಿಸಿದರು. ಸ್ಥಳೀಯ ಹೆಸರಾಂತ ಕಲಾ ತಂಡವಾದ ಶ್ರೀ ಗುರು ಕಲಾನಿಕೇತನ ತಂಡದವರು ನಾಡಗೀತೆ ಹಾಗೂ ಕನ್ನಡ ಗೀತೆಗಳನ್ನು ಹಾಡಿದರು.