`ನಿಮ್ಮಲ್ಲಿಗೆ ಕನ್ನಡ ಕೂಟ’ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ
`ಚಲನ ಶೀಲ ಜಾನಪದ’ ವಿಷಯ ಕುರಿತು ಉಪನ್ಯಾಸ
ದಾವಣಗೆರೆ, ನ. 28- ನಮ್ಮ ಬದುಕೇ ಒಂದು ಜಾನಪದ, ನಾವು ಯಾವ ತೆರನಾದ ಶಿಕ್ಷಣ ಪಡೆದರೂ, ಯಾವ ಪರಂಪರೆಯಲ್ಲಿ ಹುಟ್ಟಿ ಬೆಳೆಯುತ್ತೇವೆಯೋ ಅದೇ ಪರಂಪರೆಯ ಅನೇಕ ಅಂಶಗಳನ್ನು ಬಿಡಲು ಸಾಧ್ಯವಿಲ್ಲ ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.
ದಕ್ಷಿಣ ಕ್ಯಾಲಿಫೋರ್ನಿಯಾದ ಕರ್ನಾಟಕ ಸಾಂಸ್ಕೃತಿಕ ಸಂಘದ `ನಿಮ್ಮಲ್ಲಿಗೆ ಕನ್ನಡ ಕೂಟ’ ಆನ್ ಲೈನ್ ಸಂವಾದ ಕಾರ್ಯಕ್ರಮದಲ್ಲಿ `ಚಲನ ಶೀಲ ಜಾನಪದ’ ವಿಷಯ ಕುರಿತು ಅವರು ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ನಾವು ಎಂತಹ ನಾವೀನ್ಯತೆ ಶಿಕ್ಷಣ ಪಡೆದರೂ, ನಮ್ಮ ಪರಂಪರೆ ನಮ್ಮನ್ನು ಬೆಳೆಸಿ, ಪೋಷಿಸುತ್ತದೆ ಮತ್ತು ಸಮೃದ್ದಿಯಾಗುವಂತೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಕನ್ನಡ ಸಾಹಿತ್ಯಕ್ಕೆ 2500 ವರ್ಷಗಳ ಸುದೀರ್ಘ ಪರಂಪರೆಯಿದೆ. ಜಾನಪದದ ಪರಂಪರೆ ಇತಿಹಾಸ ಕರಾರುವಕ್ಕಾಗಿ ಹೇಳುವುದು ಕಷ್ಟ. ಮನುಷ್ಯ ಹುಟ್ಟಿ ಬೆಳೆದು ಮಾತನಾಡಲು ಆರಂಭಿಸಿದಾಗಿನಿಂದ ಹಾಗೂ ತನ್ನ ಭಾವನೆಗಳನ್ನು ಹಂಚುಕೊಳ್ಳಲಾರಂಭಿಸಿದಾಗಿನಿಂದಲೂ ಜನಪದ ಬೆಳೆದಿದೆ ಎಂದು ಹೇಳಿದರು.
ಪ್ರಪಂಚದಾದ್ಯಂತ 150 ವರ್ಷಗಳಿಂದಾಚೆಗೆ ಜಾನಪದದ ಅಧ್ಯಯನ ಆರಂಭವಾಗಿದೆ. ಸಾಮಾನ್ಯ ಜನರ ಭಾಷೆ ಹೇಗೆ ಸಾಹಿತ್ಯವಾಯಿತು. ನಂಬಿಕೆ, ಆಚರಣೆ ಹೇಗೆ ಬರಲಾರಂಭಿಸಿದವು ಎಂಬುದರ ಅಧ್ಯಯನ ಇತ್ತೀಚೆಗೆ ನಡೆಯುತ್ತಿದೆ ಎಂದರು.
ಆರಂಭದಲ್ಲಿ ಯಾವ ಅನುಕೂಲಗಳೂ ಇಲ್ಲದ ವೇಳೆ ಮನುಷ್ಯ ಬದುಕಿಗಾಗಿ ಬೇಟೆಯಾಡುತ್ತಿದ್ದ. ನಂತರ ಪಶು ಪಾಲನೆ ಆರಂಭಿಸಿ ಒಂದೆಡೆ ನೆಲೆ ನಿಂತ. ದಿನ ಕಳೆದಂತೆ ವ್ಯವಸಾಯ ಆರಂಭಿಸಿದ. ಕುಟುಂಬಗಳು, ಸಂಬಂಧಗಳು ಆರಂಭವಾದವು. ಚೌಕಟ್ಟುಗಳನ್ನು ಹಾಕಿಕೊಳ್ಳಲಾರಂಭಿಸಿದರು. ಸರಿ, ತಪ್ಪುಗಳ ಮಾತುಗಳು ಆರಂಭವಾದವು. ವ್ಯವಸಾಯದಿಂದ ನಮಗೆ ಸಂಸ್ಕೃತಿ ಬಂತು. ಅದು ನಾಗರಿಕತೆ ಪೋಷಿಸಿಕೊಳ್ಳುತ್ತಾ ಮುಂದುವರೆಯಿತು ಎಂದು ಈಶ್ವರಪ್ಪ ವಿವರಿಸಿದರು.
ಪ್ರಸ್ತುತ ನಾವು ಶೈಕ್ಷಣಿಕ ಪ್ರಪಂಚಕ್ಕೆ ತೆರೆದುಕೊಂಡಿರುವುದಿಂದ ಹಿಂದಿನವರು ಹೇಳುವ ಜಾನಪದ ರೀತಿ, ಇಂದಿನವರೂ ಹೇಳುವ ರೀತಿಯಲ್ಲೂ ಬದಲಾವಣೆಯಾಗಿವೆ. ಹಿಂದಿನ ಪರಂಪರೆಯ ಜನ ಹೇಳಿದ್ದನ್ನು ನಾವು ಹೇಳಲು ಸಾಧ್ಯವಾಗುತ್ತಿಲ್ಲ. ಅದಕ್ಕೆ ಆಧುನಿಕತೆ ಸ್ಪರ್ಷ ಬಂದಿದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಉತ್ತರಿಸಿದರು.