ದೆಹಲಿಯಲ್ಲಿ ರೈತರ ಪ್ರತಿಭಟನೆ ಹತ್ತಿಕ್ಕುವ ಯತ್ನ ಖಂಡನೀಯ

ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ 

ದಾವಣಗೆರೆ, ನ. 28- ಯಾರಿಗೂ ತೊಂದರೆ ಮಾಡದಂತೆ ಪ್ರತಿಭಟನೆ ನಡೆಸುವ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬರಿಗೂ ನೀಡಿದೆ. ಆದರೆ, ಕೇಂದ್ರ ಸರ್ಕಾರ ತನ್ನ ವಿರುದ್ಧ ಧ್ವನಿ ಎತ್ತಿದ ರೈತರ ಹೋರಾಟವನ್ನು ಪೊಲೀಸ್ ಬಲ ಪ್ರಯೋಗದ ಮೂಲಕ ಹತ್ತಿಕ್ಕಲು ಮುಂದಾಗಿರುವುದು ಸರಿಯಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿ ಪಾಟೀಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ, ಕಾರ್ಮಿಕ ಕಾಯ್ದೆಗಳನ್ನು ಸುಗ್ರಿವಾಜ್ಞೆ ಮೂಲಕ ಜಾರಿಗೆ ತಂದಿರುವುದನ್ನು ವಿರೋಧಿಸಿ ನಡೆದ ದೆಹಲಿ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿರುವ ರೈತರ ಮೇಲೆ ಕೇಂದ್ರ ಸರ್ಕಾರ ಅಶ್ರುವಾಯು ಶೆಲ್ ಸಿಡಿಸಿದ್ದಾರೆ, ಜಲ ಫಿರಂಗಿ ಪ್ರಯೋಗಿಸಿ, ಪ್ರತಿಭಟನೆಯ ನೇತೃತ್ವ ವಹಿಸಿದ್ದ ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ ಅವರನ್ನು ಬಂಧಿಸಿರುವುದು ಅತ್ಯಂತ ಖಂಡನೀಯ ಎಂದರು.

ಉಭಯ ಸರ್ಕಾರಗಳು ವಿಧಾನಸಭೆ ಮತ್ತು ಸಂಸ ತ್‍ನಲ್ಲಿ ಯಾವುದೇ ಚರ್ಚೆ ನಡೆಸದೇ ಸುಗ್ರೀವಾಜ್ಞೆ ಗಳ ಮೂಲಕ ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ದುಡಿಯುವ ವರ್ಗದ ಜನರ ಬದುಕು ಮೂರಾ ಬಟ್ಟೆ ಮಾಡಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಿಜಕ್ಕೂ ರೈತಪರ ಕಾಳಜಿ ಇದ್ದರೆ, ತಕ್ಷಣವೇ ರೈತ ಮುಖಂಡರ ಸಭೆ ಕರೆದು ಜನ ವಿರೋಧಿ ಕಾಯ್ದೆಗಳನ್ನು ವಾಪಾಸ್ ಪಡೆಯಬೇಕು. ಪ್ರತಿಭಟನಾನಿರತ ರೈತರ ಮೇಲೆ ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಬಂಧಿಸಿರುವ ಯೋಗೀಂದ್ರ ಯಾದವ್ ಮತ್ತು ಮೇಧಾ ಪಾಟ್ಕರ್ ಅವರನ್ನು ಬಿಡುಗಡೆ ಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರಾಣಿಗಳೊಂದಿಗೆ ಡಿ.15ರಿಂದ ಧರಣಿ: ಜಿಲ್ಲೆಯಲ್ಲಿ ಭತ್ತ ಖರೀದಿ ಕೇಂದ್ರ ಆರಂಭಿಸಬೇಕು. ಕಾರ್ಗಿಲ್ ಕಾರ್ಖಾನೆಯವರು ಸ್ಥಳೀಯ ರೈತರಿಂದ ಶೇ.60 ರಷ್ಟು ಮೆಕ್ಕೇಜೋಳ ಖರೀದಿಸಬೇಕು.  ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು. ಇಲ್ಲದಿದ್ದರೆ ನಗರದ ಉಪವಿಭಾಗಾಧಿಕಾರಿ ಕಚೇರಿ ಎದುರು ಡಿ.15ರಿಂದ ಎತ್ತು, ಹಸು, ಎಮ್ಮೆ, ಕುರಿ ಸೇರಿದಂತೆ ಇತರೆ ಸಾಕು ಪ್ರಾಣಿಗಳೊಂದಿಗೆ ಧರಣಿ ನಡೆಸುವುದಾಗಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿ ಕುಮಾರ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಲ್ಲೂರು ರವಿ ಕುಮಾರ್, ಜಿಲ್ಲಾಧ್ಯಕ್ಷ ಕೆ.ಎಸ್.ಪ್ರಸಾದ್, ಮುಖಂಡರಾದ ಗೆದ್ಲೆಹಟ್ಟಿ ಹನು ಮಂತಪ್ಪ, ನಾಗೇಂದ್ರಪ್ಪ, ಲಿಂಗರಾಜ್ ಮತ್ತಿತರರಿದ್ದರು.

error: Content is protected !!