ದೇಶದ ಎಲ್ಲರಿಗೂ ಕೋವಿಡ್ ಲಸಿಕೆ ನೀಡುವುದು ಸುಲಭವಲ್ಲ, ಸವಾಲು

ಪತ್ರಕರ್ತ ಎಚ್‌.ಬಿ. ಮಂಜುನಾಥ್‌

ದಾವಣಗೆರೆ, ನ.27- `ಕೋವಿಡ್‌-19′ ನಿರೋಧಕ ಲಸಿಕೆ ಸದ್ಯದಲ್ಲೇ ಬಂದರೂ ಅದನ್ನು ನಮ್ಮ ದೇಶದ ಸುಮಾರು 132 ಕೋಟಿಗೂ ಅಧಿಕ ಜನಸಂಖ್ಯೆಗೆ ನೀಡುವುದೂ ದೊಡ್ಡ ಸವಾಲಾಗಿದ್ದು, ಈ ಕಾರ್ಯದಲ್ಲಿ ನಗರ, ಪಟ್ಟಣ ಮತ್ತು ಗ್ರಾಮಾಂತರ ಸಹಕಾರ ಸಂಸ್ಥಾ ಪನೆಗಳ ಸಹಕಾರವೂ ಬೇಕಾಗಬಹುದೆಂದು ಹಿರಿಯ ಪತ್ರಕರ್ತ ಎಚ್‌.ಬಿ. ಮಂಜುನಾಥ್‌ ಅಭಿಪ್ರಾಯಪಟ್ಟರು.

ಅಖಿಲ ಭಾರತ 67ನೇ ಸಹಕಾರ ಸಪ್ತಾಹದ ಅಂಗವಾಗಿ ಚನ್ನಗಿರಿಯಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮದ ಉಪನ್ಯಾಸಕರಾಗಿ `ಕೊರೊನೋತ್ತರ, ಸಹಕಾರ ಸಂಸ್ಥೆಗಳ ಜವಾಬ್ದಾರಿ ಮತ್ತು ಪಾತ್ರ’ ಎಂಬ ವಿಷಯವಾಗಿ ಅವರು ಮಾತನಾಡಿದರು.

ಕಾಲವನ್ನು `ಕ್ರಿಸ್ತಪೂರ್ವ’, `ಕ್ರಿಸ್ತೋತ್ತರ’ ಅಂದರೆ `ಕ್ರಿಸ್ತಶಕ’ ಎಂದು ವಿಶ್ವಾದ್ಯಂತ ಹೇಳುವುದು ರೂಢಿಯಲ್ಲಿದೆ. ಭಾರತದಲ್ಲಿ `ಸ್ವಾತಂತ್ರ್ಯ ಪೂರ್ವ’ ಮತ್ತು ಸ್ವಾತಂತ್ರೋತ್ತರ’ ಅಂದರೆ `ಸ್ವಾತಂತ್ರ್ಯಾ ನಂತರ’ ಎಂದೂ ವಿಂಗಡಿಸಿ ಹೇಳುವುದು ಚಾಲ್ತಿಯಲ್ಲಿದೆ, ಆದರೆ ಈಗ ಜಗತ್ತಿನಾದ್ಯಂತ ಸ್ಥಿತಿಯನ್ನು `ಕೊರೊನಾ ಪೂರ್ವ’ ಮತ್ತು `ಕೊರೊನೋತ್ತರ’ ಅಂದರೆ `ಕೊರೊನಾ ನಂತರ’ ಎಂದು ಹೇಳುವಂತಾಗಿರುವುದು ವಿಧಿ ವಿಪರ್ಯಾಸ ದಂತಾ ಗಿದ್ದರೂ ಪ್ರಸ್ತುತವಾಗಿ ಸಂಘ, ಸಂಸ್ಥೆ, ಸಂಸ್ಥಾಪನೆಗಳೆಲ್ಲಾ ತಮ್ಮ ತಮ್ಮ ವಾರ್ಷಿಕ ಸಾಮಾನ್ಯ ಸಭೆಯನ್ನು `ವೀಡಿಯೋ ಕಾನ್ಫರೆನ್ಸ್‌’ ವಿಧಾನದಲ್ಲಿ ನಡೆಸುವ ಅನಿವಾ ರ್ಯತೆ ಉಂಟಾಗಿದೆ.

ಚನ್ನಗಿರಿಯ ಮೌದ್ಗಲ್ ಆಂಜನೇಯ ದೇವಸ್ಥಾನದ ಸಭಾ ಭವನದಲ್ಲಿ ಏರ್ಪಾಡಾಗಿದ್ದ ಕಾರ್ಯಕ್ರಮವನ್ನು ಶಾಸಕ ಹಾಗೂ ಕೆ.ಎಸ್‌.ಡಿ.ಎಲ್‌ ಅಧ್ಯಕ್ಷ ಮಾಡಾಳು ವಿರೂಪಾಕ್ಷಪ್ಪ ಉದ್ಘಾಟಿಸಿದರು. 

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್‌, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಸಹಕಾರಿ ಹಾಲು ಒಕ್ಕೂಟ, ತುಮ್‌ಕೋಸ್‌, ಟಿ.ಎ.ಪಿ.ಎಂ.ಎಸ್‌, ಪಿಕಾರ್ಡ್‌ ಬ್ಯಾಂಕ್‌ ಹಾಗೂ ವಿವಿಧ ಸಹಕಾರ ಸಂಘಗಳ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮ ಏರ್ಪಡಾಗಿತ್ತು. 

ಡಿ.ಸಿ.ಸಿ. ಬ್ಯಾಂಕ್‌ ಅಧ್ಯಕ್ಷ ಡಾ. ಜೆ.ಆರ್‌. ಷಣ್ಮುಖಪ್ಪ, ಜಿಲ್ಲಾ ಸಹಕಾರ ಯೂನಿಯನ್‌ ಅಧ್ಯಕ್ಷ ಎನ್‌.ಎ. ಮುರುಗೇಶ್‌, ಉಪಾಧ್ಯಕ್ಷ ಎಚ್. ಬಸವರಾಜಪ್ಪ, ಎಸ್‌.ಬಿ. ಶಿವಕುಮಾರ್‌, ಜಿ.ಎನ್‌. ಸ್ವಾಮಿ, ಕೆ.ಜಿ. ಉಮೇಶ್‌, ತೇಜಸ್ವಿ ಪಟೇಲ್‌, ಕೆಂಗಲಹಳ್ಳಿ ಷಣ್ಮುಖಪ್ಪ, ಕೆ.ಎಂ. ಜಗದೀಶ್‌ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!