ದಾವಣಗೆರೆ, ನ.24 – ಕೋವಿಡ್-19 ಸೋಂಕಿನ ಕಾರಣಕ್ಕಾಗಿ ಕಳೆದ ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ನಡೆದ ದಾವಣಗೆರೆ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಅಂತಿಮ ವರ್ಷದ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಶೀಘ್ರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವ ರಾದ ಪ್ರೊ. ಎಚ್.ಎಸ್. ಅನಿತಾ ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಮತ್ತು ಯುಜಿಸಿ ಮಾರ್ಗಸೂಚಿಯಂತೆ ಪರೀಕ್ಷೆ ಗಳನ್ನು ನಡೆಸಲಾಗಿತ್ತು. ಆದರೆ ಕೋವಿಡ್-19ರ ಕಾರಣಕ್ಕಾಗಿ ಕೆಲವು ವಿದ್ಯಾರ್ಥಿಗಳು ಭಾಗವಹಿ ಸಲು ಸಾಧ್ಯವಾಗಿರಲಿಲ್ಲ. ಅವರ ಶೈಕ್ಷಣಿಕ ಭವಿಷ್ಯದ ಉದ್ದೇಶದಿಂದ ಮತ್ತು ಯಾವುದೇ ವಿದ್ಯಾರ್ಥಿಗೂ ಅನ್ಯಾಯ ಆಗಬಾರದು ಎಂಬ ಉದ್ದೇಶದಿಂದ ಗೈರು ಹಾಜರಾದ ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ವಿಶೇಷ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.
ಈಗಾಗಲೇ ಪರೀಕ್ಷೆಗೆ ಸಿದ್ಧತೆ ನಡೆಯುತ್ತಿದೆ. ಗೈರು ಹಾಜರಾದ ವಿದ್ಯಾರ್ಥಿಗಳ ಅಧ್ಯಯನ ವಿಭಾಗ ಹಾಗೂ ಇನ್ನಿತರೆ ಮಾಹಿತಿ ಪಡೆದು ಪರೀಕ್ಷೆಗೆ ಪ್ರಶ್ನೆ ಪತ್ರಿಕೆಗಳನ್ನು ಮುದ್ರಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಆದಷ್ಟು ಶೀಘ್ರ ಪರೀಕ್ಷೆ ಕುರಿತು ವಿದ್ಯಾರ್ಥಿಗಳಿಗೆ ಮತ್ತು ಕಾಲೇ ಜುಗಳಿಗೆ ಸೂಚನೆ ನೀಡಲಾಗುವುದು ಎಂದಿದ್ದಾರೆ.
ಇತ್ತೀಚೆಗೆ ನಡೆದ ಅಂತಿಮ ವರ್ಷದ ಸ್ನಾತಕ ಪದವಿ ಪರೀಕ್ಷೆಗೆ ಹೆಸರು ನೋಂದಣಿ ಮಾಡಿಕೊಂಡಿದ್ದ ಸುಮಾರು 20 ಸಾವಿರ ವಿದ್ಯಾರ್ಥಿಗಳ ಪೈಕಿ 653 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು. ಸ್ನಾತಕೋತ್ತರ ಪದವಿ ಪರೀಕ್ಷೆಗೆ 1500 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿ ಕೊಂಡಿದ್ದು, 40 ವಿದ್ಯಾರ್ಥಿ ಗಳು ಗೈರು ಹಾಜರಾಗಿದ್ದರು. ಅವರೆಲ್ಲರಿಗೂ ಪರೀಕ್ಷೆಗೆ ಅವಕಾಶ ಒದಗಿಸಲು ವಿಶ್ವವಿದ್ಯಾ ನಿಲಯ ನಿರ್ಧರಿಸಿದೆ ಎಂದು ಹೇಳಿದ್ದಾರೆ.
ಕೊನೆಯ ವಿದ್ಯಾರ್ಥಿಗೂ ಅನ್ಯಾಯ ಆಗಬಾರದು : ಇಡೀ ಜಗತ್ತನ್ನು ಆವರಿಸಿಕೊಂಡಿರುವ ಕೋವಿಡ್-19 ಜನಜೀವನವನ್ನು ತಲ್ಲಣಗೊಳಿಸಿದೆ. ಈ ವೈರಾಣು ವಿದ್ಯಾರ್ಥಿಗಳಲ್ಲಿ, ಪಾಲಕರಲ್ಲಿ ಆತಂಕ ಮೂಡಿಸಿದ್ದು ಸಹಜ. ಆದರೆ ಈ ಕಾರಣಕ್ಕಾಗಿಯೇ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗದ ಕಟ್ಟ ಕಡೆಯ ವಿದ್ಯಾರ್ಥಿಗೂ ಶೈಕ್ಷಣಿಕವಾಗಿ ಅನ್ಯಾಯ ಆಗಬಾರದು. ದಾವಣಗೆರೆ ವಿಶ್ವವಿದ್ಯಾನಿಲಯ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಅವರ ಭವಿಷ್ಯಕ್ಕೆ ಪೂರಕ ವಾತಾವರಣ ನಿರ್ಮಿಸಲಾಗುವುದು. ಈ ಹಿನ್ನೆಲೆಯಲ್ಲಿ ವಿಶೇಷ ಪರೀಕ್ಷೆ ನಡೆಸಲು ಮುಂದಾಗಿದೆ. ಈ ಕುರಿತು ಸರ್ಕಾರಕ್ಕೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.