7 ಸಾವಿರಕ್ಕೂ ಹೆಚ್ಚು ಟೆಸ್ಟ್‌ನಲ್ಲಿ ಕೇವಲ 12 ಪಾಸಿಟಿವ್
ದಾವಣಗೆರೆ, ನ. 21 – ಜಿಲ್ಲೆಯಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಕ್ಷೀಣಿಸಿದ್ದು, ಕಾಲೇಜು ಪ್ರವೇಶದ ಹಿನ್ನೆಲೆಯಲ್ಲಿ ನಡೆಸಲಾದ ಕೊರೊನಾ ಪರೀಕ್ಷೆಗಳಲ್ಲಿ 7,252 ಟೆಸ್ಟ್‌ಗಳಲ್ಲಿ ಕೇವಲ 12 ಜನರಿಗೆ ಪಾಸಿಟಿವ್ ಬಂದಿದೆ. ಇದರಿಂದಾಗಿ ಕಾಲೇಜು ಶಿಕ್ಷಣಕ್ಕೆ ಶುಭಾರಂಭ ದೊರಕಿದಂತಾಗಿದೆ.
ಪದವಿ ಕಾಲೇಜುಗಳು ಆರಂಭವಾಗಿದ್ದು, ಕಾಲೇಜಿಗೆ ಬರುವ, ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿ ಕಡ್ಡಾಯ ಕೊರೊನಾ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ಹೊಂದಿರಬೇಕು ಎಂದು ತಿಳಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ 7,240 ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೊರೊನಾ ಟೆಸ್ಟ್‌ನಲ್ಲಿ ಪಾಸ್ ಆಗಿ ಕಾಲೇಜಿಗೆ ಬರುವ ಅರ್ಹತೆ ಪಡೆದುಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ಕಳೆದ ಹತ್ತು ದಿನಗಳಲ್ಲಿ ಬೋಧಕರು, ವಿದ್ಯಾರ್ಥಿಗಳು ಹಾಗೂ ಬೋಧಕೇತರ ಸಿಬ್ಬಂದಿ ದೊಡ್ಡ ಪ್ರಮಾಣದಲ್ಲಿ ಕೊರೊನಾ ಪರೀಕ್ಷೆಗೆ ಒಳಗಾಗುತ್ತಿದ್ದಾರೆ.
ಇದುವರೆಗೆ 11,679 ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಕೊರೊನಾ ಪರೀಕ್ಷೆಗೆ ಒಳಗಾಗಿದ್ದಾರೆ. ಸದ್ಯಕ್ಕೆ 7,252 ಜನರ ಟೆಸ್ಟ್ ಫಲಿತಾಂಶ ಬಂದಿದ್ದು ಇವರ ಪೈಕಿ ಕೇವಲ 12 ಜನರಿಗೆ ಮಾತ್ರ ಪಾಸಿಟಿವ್ ಬಂದಿದೆ.
1,963 ಬೋಧಕೇತರ ಸಿಬ್ಬಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದುವರೆಗೂ 970 ರಿಸಲ್ಟ್ ಬಂದಿದ್ದು ಇವರಲ್ಲಿ ಒಬ್ಬರಿಗೂ ಪಾಸಿಟಿವ್ ಬಂದಿಲ್ಲ.
ಉಳಿದಂತೆ 4,380 ವಿದ್ಯಾರ್ಥಿಗಳ ಟೆಸ್ಟ್ ರಿಸಲ್ಟ್ ಬಂದಿದ್ದು ಇವರಲ್ಲಿ ಕೇವಲ 9 ವಿದ್ಯಾರ್ಥಿಗಳಿಗೆ ಪಾಸಿಟಿವ್ ಬಂದಿದೆ. ಬೋಧಕ ಸಿಬ್ಬಂದಿಯ ಪೈಕಿ 1,890 ಜನರ ರಿಸಲ್ಟ್ ಬಂದಿದ್ದು, ಮೂವರಿಗೆ ಮಾತ್ರ ಪಾಸಿಟಿವ್ ಬಂದಿದೆ.
ಒಟ್ಟಾರೆ ಇದುವರೆಗೂ 7,240 ಜನರ ಕೊರೊನಾ ಟೆಸ್ಟ್ ಮಾಹಿತಿ ಬಂದಿದ್ದು, 12 ಜನರಲ್ಲಿ ಮಾತ್ರ ಸೋಂಕಿರುವುದು ಕಂಡು ಬಂದಿದೆ. ಇದನ್ನು ಪರಿಗಣಿಸಿದಾಗ ಸೋಂಕಿನ ಪ್ರಮಾಣ ಕೇವಲ ಶೇ.0.16ರಷ್ಟಾಗುತ್ತದೆ.
ಜಿಲ್ಲೆಯಲ್ಲಿ ಇದುವರೆಗೆ ನಡೆಸಲಾದ ಕೊರೊನಾ ಪರೀಕ್ಷೆಗಳಲ್ಲಿ ಪಾಸಿಟಿವ್ ಬರುವ ಪ್ರಮಾಣ ಶೇ.2.2ರಷ್ಟಿತ್ತು, ಇದು ಕಡಿಮೆ ಎನ್ನಬಹುದು. ಕಳೆದ ಹತ್ತು ದಿನಗಳಲ್ಲಿ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ಮಾಡಲಾದ ಕೊರೊನಾ ಟೆಸ್ಟ್‌ನಲ್ಲಿ ಇನ್ನೂ ಕಡಿಮೆ ಪಾಸಿಟಿವ್ ಬಂದಿದೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಜಿ.ಡಿ. ರಾಘವನ್ ತಿಳಿಸಿದ್ದಾರೆ.
ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗಿರುವುದು, ಸೋಂಕಿನ ದರದಲ್ಲಿ ಇಳಿಕೆಯಾಗಿದೆ ಎಂಬುದನ್ನು ತೋರಿಸುತ್ತದೆ. ಕೊರೊನಾ ಹರಡುವಿಕೆಯ ಸರಣಿಯನ್ನು ತುಂಡರಿಸಿರುವುದೇ ಇದಕ್ಕೆ ಪ್ರಮುಖ ಕಾರಣ ಎಂದವರು ಹೇಳಿದ್ದಾರೆ.
ಮನೆ ಮನೆಗೆ ಆರೋಗ್ಯ ಸಿಬ್ಬಂದಿ ಭೇಟಿ ನೀಡಿ ವಿಸ್ತೃತ ನಿಗಾ ವಹಿಸಿದ್ದಾರೆ. ಇದರಿಂದಾಗಿ ತ್ವರಿತವಾಗಿ ಸೋಂಕಿತರ ಪತ್ತೆ ಮಾಡಲು ಸಾಧ್ಯವಾಗಿದೆ. ಟೆಸ್ಟ್ ಸಂಖ್ಯೆಯೂ ಹೆಚ್ಚಾಗಿದೆ. ಇದೆಲ್ಲದರ ಕಾರಣದಿಂದಾಗಿ ಸೋಂಕು ನಿಯಂತ್ರಣ ಮಾಡುವುದು ಸಾಧ್ಯವಾಗಿದೆ ಎಂದು ಡಾ. ರಾಘವನ್ ತಿಳಿಸಿದ್ದಾರೆ.
ನಗರದಲ್ಲಿರುವ ಮೂರು ಕೊರೊನಾ ಟೆಸ್ಟ್ ಲ್ಯಾಬ್‌ಗಳ ಪರೀಕ್ಷೆ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ. ಪ್ರತಿನಿತ್ಯ ಈಗ 1,500ವರೆಗೆ ಟೆಸ್ಟ್‌ಗಳು ನಡೆಯುತ್ತಿವೆ. ಪೂಲಿಂಗ್ ಟೆಸ್ಟ್ ವಿಧಾನದಿಂದಲೂ ಹೆಚ್ಚು ಪರೀಕ್ಷೆ ನಡೆಸಲು ಸಾಧ್ಯವಾಗಿದೆ ಎಂದವರು ಹೇಳಿದ್ದಾರೆ.
ಜಿಲ್ಲೆಯಲ್ಲಿ ವ್ಯಾಪಕವಾಗಿ ಕೊರೊನಾ ಪರೀಕ್ಷೆ ನಡೆಸಿದರೂ ಸಹ, ಅತಿ ಕಡಿಮೆ ಪಾಸಿಟಿವ್ ಬಂದಿರುವುದು ಸಕಾರಾತ್ಮಕ ಬೆಳವಣಿಗೆಯಾಗಿದೆ. ಶಾಲಾ – ಕಾಲೇಜುಗಳ ಆರಂಭಕ್ಕೆ ಪೋಷಕರು ಹಾಗೂ ವಿದ್ಯಾರ್ಥಿಗಳಲ್ಲಿ ಇರಬಹುದಾದ ಹಿಂಜರಿಕೆ ದೂರ ಮಾಡಲು ಇದು ಸಹಾಯಕವಾಗಲಿದೆ ಎಂದರೂ ತಪ್ಪಾಗಲಾರದು.