ದಾವಣಗೆರೆ, ನ. 20- ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯನ್ನು ವಿರೋಧಿಸಿ ಕರ್ನಾಟಕ ಬಂದ್ ಕರೆ ನೀಡಿರುವುದನ್ನು ಕೈ ಬಿಟ್ಟು, ಪ್ರಾಧಿಕಾರಕ್ಕೆ ಬೆಂಬಲ ನೀಡುವಂತೆ ಕ್ಷತ್ರಿಯ ಮರಾಠ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷ ಯಶವಂತರಾವ್ ಜಾಧವ್ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ರಾಜ್ಯ ಸರ್ಕಾರವು ಆರ್ಥಿಕ, ಶೈಕ್ಷಣಿಕ ವಾಗಿ ಹಿಂದುಳಿದ ಮರಾಠ ಜನಾಂಗದ ಅಭಿವೃದ್ಧಿಗಾಗಿ ಪ್ರಾಧಿಕಾರ ರಚನೆ ಮಾಡಿ, 50 ಕೋಟಿ ರೂ. ಮೀಸಲಿಟ್ಟಿರುವುದು ಸ್ವಾಗತಾರ್ಹ. ಆದರೆ, ಪ್ರಾಧಿಕಾರ ರಚನೆಗೆ ಹಲವರು ವಿರೋಧಿಸುತ್ತಿರುವುದು ವಿಷಾದದ ಸಂಗತಿ ಎಂದರು.
ಪ್ರಾಧಿಕಾರ ರಚನೆ ಮಾಡಿರುವುದು ಜನಾಂಗದ ಅಭಿವೃದ್ಧಿಗಾಗಿಯೇ ಹೊರತು ಭಾಷೆಯ ಅಭಿವೃದ್ಧಿಗಲ್ಲ ಎಂದು ಸ್ಪಷ್ಟಪಡಿಸಿದ ಜಾಧವ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ ಸೇರಿದಂತೆ ಕನ್ನಡ ಪರ ಸಂಘಟನೆಗಳು ರಾಜ್ಯದಲ್ಲಿನ ಮರಾಠ ಜನಾಂಗದ ಇತಿಹಾಸ ತಿಳಿಯದೆ, ಗಡಿ ಭಾಗದಲ್ಲಿ ಭಾಷಾ ಸಮಸ್ಯೆ ನೆಪವಾಗಿಟ್ಟುಕೊಂಡು ಒಂದು ಸಮುದಾಯದ ಅಭಿವೃದ್ಧಿ ವಿರೋಧಿಸುವುದು ಒಳಿತಲ್ಲ ಎಂದರು.
ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಮರಾಠ ಜನಾಂಗದವರಿದ್ದಾರೆ. ಕನ್ನಡ ಪರ ಹೋರಾಟಗಳಲ್ಲೂ ಭಾಗವಹಿಸಿದ್ದಾರೆ. ಎಂಇಎಸ್ ಪುಂಡಾಟಿಕೆಗೆ ಎಲ್ಲರ ವಿರೋಧವೂ ಇದೆ. ರಾಜ್ಯದಲ್ಲಿನ ಮರಾಠರ ಭಾಷೆ ಕನ್ನಡ, ತಾಯಿ ನಾಡು ಕರ್ನಾಟಕವೇ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಖಜಾಂಚಿ ಗೋಪಲ್ ರಾವ್ ಮಾನೆ, ನಿರ್ದೇಶಕ ಸೋಮಶೇಖರ ಪವಾರ್, ಸಮಾಜದ ಮುಖಂಡರಾದ ಪರಶುರಾಮರಾ್ ಸಾಳಂಕಿ, ಮಂಜುನಾಥ ರಾವ್ ಕಾಟೆ, ರಾಘವೇಂದ್ರ ಇತರರು ಉಪಸ್ಥಿತರಿದ್ದರು.