ರಂಭಾಪುರಿ ಪೀಠ (ಬಾಳೆಹೊನ್ನೂರು) ನ.19- ಸಂತಸ ಮತ್ತು ಶಾಂತಿಯ ಬದುಕಿಗೆ ಧರ್ಮವೇ ಮೂಲ. ಸುಖ – ಸಂತೋಷ ನಮಗಾಗಿ ಹೇಗೆ ಬಯಸುತ್ತೇವೆಯೋ ಹಾಗೆ ಇತರರಿಗಾಗಿ ಬಯಸುವುದು ನಿಜವಾದ ಧರ್ಮ. ಮೌಲ್ಯಗಳ ಪರಿಪಾಲನೆಯಿಲ್ಲದ ಮನುಷ್ಯನ ಜೀವನ ವ್ಯರ್ಥವಾಗುತ್ತದೆ ಎಂದು ರಂಭಾಪುರಿ ಪೀಠದ ಜಗದ್ಗುರು ಶ್ರೀ ಡಾ. ವೀರ ಸೋಮೇಶ್ವರ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶ್ರೀ ರಂಭಾಪುರಿ ಪೀಠದಲ್ಲಿ ಬಲಿ ಪಾಡ್ಯಮಿಯಂದು ಧರ್ಮ ದೀಪೋತ್ಸವ ನೆರವೇರಿಸಿ ಜಗದ್ಗುರುಗಳು ಆಶೀರ್ವಚನ ನೀಡಿದರು.
ಸಾಧನೆಯ ಹಾದಿಯಲ್ಲಿ ಬರುವ ಕಷ್ಟಗಳು ಜೀವನ ಶ್ರೇಯಸ್ಸಿಗೆ ತಳಪಾಯ. ಸತ್ಯ ಸಂಸ್ಕೃತಿಗಾಗಿ ಶ್ರಮಿಸಿದವರು ಯಾವಾಗಲೂ ನೆನಪಿನಲ್ಲಿ ಉಳಿಯುತ್ತಾರೆ. ಅನ್ಯಾಯ ಅಧರ್ಮದಲ್ಲಿ ನಡೆದವರು ಕಾಲ ಗರ್ಭದಲ್ಲಿ ನಾಶವಾಗಿ ಹೋಗಿದ್ದಾರೆ.
ಬಾಳ ಪಥದಲ್ಲಿ ಆದರ್ಶ ಗುಣಗಳನ್ನು ಬೆಳೆಸಿಕೊಳ್ಳದಿದ್ದರೆ ನೆಮ್ಮದಿಯಿಂದ ಬಾಳಲು ಸಾಧ್ಯವಾಗುವುದಿಲ್ಲ. ಶ್ರೀಮಂತ ತನ್ನ ಬಗ್ಗೆ ಅಷ್ಟೇ ಚಿಂತಿಸುವನೇ ಹೊರತು ಪರರ ಹಿತ ಚಿಂತನೆ ಮಾಡಲಾರ. ಆದರೆ ಸತ್ಪುರುಷರು ಪರ ಹಿತ ಚಿಂತನೆಯನ್ನು ಸದಾ ಯೋಚಿಸುತ್ತಾರೆ. ಪ್ರತಿಷ್ಠೆ-ಮತ್ಸರ ಬಿಟ್ಟು ಸಹನೆ, ಶಾಂತಿಯಿಂದ ಬಾಳಿದರೆ ಬದುಕು ಸಮೃದ್ಧಗೊಳ್ಳುವುದೆಂದರು. ಇದೇ ಸಂದರ್ಭದಲ್ಲಿ ಕರ್ಮವೀರ ದೀಪಾವಳಿ ವಿಶೇಷ ಸಂಚಿಕೆಯನ್ನು ಶ್ರೀ ರಂಭಾಪುರಿ ಜಗದ್ಗುರುಗಳು ಬಿಡುಗಡೆಗೊಳಿಸಿದರು.
ಅಭಿವೃದ್ಧಿ ನಿಗಮ ರಚನೆಗೆ ಸ್ವಾಗತ: ಬೇರೆ ಬೇರೆ ಸಮುದಾಯಗಳ ಬೆಳವಣಿಗೆಗಾಗಿ ಅಭಿವೃದ್ಧಿ ನಿಗಮ ರಚಿಸಿದಂತೆ ವೀರಶೈವ ಲಿಂಗಾಯತ ಸಮುದಾಯದ ಬಹಳ ವರುಷಗಳ ಬೇಡಿಕೆಯನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ರಚನೆ ಘೋಷಣೆ ಮಾಡಿ ಒಂದು ಐತಿಹಾಸಿಕ ನಿರ್ಧಾರ ಕೈಗೊಂಡಿದ್ದನ್ನು ಸ್ವಾಗತಿ
ಸುತ್ತೇವೆ. ಸಮುದಾಯದ ಬೆಳವಣಿಗೆಗೆ ಅಭಿವೃದ್ಧಿ ನಿಗಮ ಕಾರ್ಯ ಕೈಗೊಳ್ಳಲೆಂದು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ಹಾರೈಸಿದ್ದಾರೆ.