ಸರ್ಕಾರದ ಕ್ರಮವನ್ನು ಸ್ವಾಗತಿಸಿದ ರಾಜನಹಳ್ಳಿ ಸ್ವಾಮೀಜಿ
ಮಲೇಬೆನ್ನೂರು, ನ.18- ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣ ಹೆಚ್ಚಳ ಮಾಡುವ ಬಗ್ಗೆ ಚರ್ಚಿಸಿ ವರದಿ ನೀಡಲು ಸಚಿವ ಸಂಪುಟದ ಉಪ ಸಮಿತಿ ರಚನೆ ಮಾಡಲು ನಿರ್ಧರಿಸಿರುವ ಸರ್ಕಾರದ ಕ್ರಮವನ್ನು ರಾಜನಹಳ್ಳಿಯ ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪನವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಎಸ್ಸಿ-ಎಸ್ಟಿ ಮೀಸಲು ಪ್ರಮಾಣವನ್ನು ಜನಸಂಖ್ಯೆಗೆ ಅನುಗುಣ ವಾಗಿ ಹೆಚ್ಚಿಸುವ ಬಗ್ಗೆ ನಡೆಯುತ್ತಿರುವ ಹೋರಾಟಗಳು ಹಾಗೂ ಅಧ್ಯಯನ ವರದಿ ಸಲ್ಲಿಕೆ ಆಗಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಈ ಬಗ್ಗೆ ಚರ್ಚಿಸಿ ವರದಿ ನೀಡುವಂತೆ ಸಚಿವ ಸಂಪುಟದ ಉಪಸಮಿತಿ ರಚಿಸಲು ತೀರ್ಮಾನಿಸಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಪ್ರತಿಫಲವಾಗಿದೆ. ಅದಕ್ಕಾಗಿ ಮುಖ್ಯಮಂತ್ರಿ ಯಡಿಯೂರಪ್ಪ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹಾಗೂ ಸಂಪುಟದ ಎಲ್ಲಾ ಸಚಿವರನ್ನು, ಸಮಾಜದ ಶಾಸಕರನ್ನು ಸಂಸದರನ್ನು ಅಭಿನಂದಿಸಿದ್ದೇನೆ ಎಂದರು.
ಮೀಸಲು ಪ್ರಮಾಣವನ್ನು ಹೆಚ್ಚಿಸುವಂತೆ ನಾವು ನಡೆಸಿದ ಪಾದಯಾತ್ರೆ ಹಾಗೂ ಹೋರಾಟಗಳ ಹಿನ್ನೆಲೆಯಲ್ಲಿ ಈ ಹಿಂದಿನ ಸಮ್ಮಿಶ್ರ ಸರ್ಕಾರ ನಿವೃತ್ತ ನ್ಯಾಯಮೂರ್ತಿ ಡಾ.ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಿತ್ತು. ನಂತರ ಬಂದ ಬಿಜೆಪಿ ಸರ್ಕಾರವು ಅದೇ ಆಯೋಗಕ್ಕೆ ವರದಿ ನೀಡುವಂತೆ ಕೇಳಿತ್ತು. ಆ ಪ್ರಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ಆಯೋಗವು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು.
ವರದಿ ಜಾರಿಗೊಳಿಸುವಂತೆ ನಾವು 2-3 ಬಾರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದೆವು. ಅಲ್ಲದೇ ಕಳೆದ ತಿಂಗಳು ಸತ್ಯಾಗ್ರಹ ಕೈಗೊಂಡಿದ್ದಾಗ ಸಚಿವರು, ಶಾಸಕರು ನಮ್ಮನ್ನು ಭೇಟಿ ಮಾಡಿ, ಮೀಸಲು ಪ್ರಮಾಣ ಹೆಚ್ಚಿಸಲು ಸರ್ಕಾರ ಬದ್ಧವಾಗಿದೆ. ಧರಣಿ ಕೈಬಿಡುವಂತೆ ಮನವಿ ಮಾಡಿದ್ದರು. ಆ ಪ್ರಕಾರ ಸರ್ಕಾರ ಇಂದು ಸಂಪುಟದ ಉಪಸಮಿತಿ ರಚನೆ ಮಾಡಲು ತೀರ್ಮಾನಿಸಿದೆ. ಆದಷ್ಟು ಬೇಗ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವಂತೆ ಶ್ರೀಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.