ಕಟಾವು ಯಂತ್ರಕ್ಕೆ ಅಧಿಕ ಹಣ : ಕ್ರಮಕ್ಕೆ ಆಗ್ರಹ

ಕಟಾವು ಯಂತ್ರಕ್ಕೆ ಅಧಿಕ ಹಣ : ಕ್ರಮಕ್ಕೆ ಆಗ್ರಹ - Janathavaniಹೊನ್ನಾಳಿ, ನ.18- ಭತ್ತದ ಕಟಾವು ಕಾರ್ಯ ಜಿಲ್ಲೆಯಾದ್ಯಂತ ಆರಂಭವಾಗಿದ್ದು, ಭತ್ತ ಕಟಾವು ಯಂತ್ರಗಳ ಮಾಲೀಕರು ರೈತರಿಂದ ಅಧಿಕ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಆರೋಪಿಸಿದ್ದಾರೆ.

ಜಿಲ್ಲಾಧಿಕಾರಿಗಳು ನಿಗದಿಪಡಿಸಿರುವ ದರದಲ್ಲಿ ಎಲ್ಲಿಯೂ ಭತ್ತದ ಕಟಾವು ಕಾರ್ಯ ಆಗುತ್ತಿಲ್ಲ. ಜಿಲ್ಲಾಡಳಿತ ಪ್ರತಿ ಎಕರೆ ಭತ್ತ ಕಟಾವಿಗೆ 1,500 ರೂ.ಗಳನ್ನು ಮಾತ್ರ ರೈತರಿಂದ ಪಡೆದುಕೊಳ್ಳಬೇಕು ಎಂಬ ಆದೇಶ ಹೊರಡಿಸಿದೆ. ಆದರೆ, ವಾಸ್ತವವಾಗಿ ರೈತರಿಂದ 2,500 ರೂ. ಹಣ ಪಡೆಯಲಾಗುತ್ತಿದೆ. ಟೈರ್ ಯಂತ್ರಗಳಾದರೆ ಪ್ರತಿ ಎಕರೆಗೆ 2,000-2,200 ರೂ. ಹಾಗೂ ಚೈನ್ ಯಂತ್ರ ಗಳಾದರೆ ಪ್ರತಿ ಎಕರೆಗೆ 2,200 -2,500 ರೂ.ಗಳವರೆಗೂ   ಡಿಮ್ಯಾಂಡ್ ಮಾಡಲಾಗುತ್ತಿದೆ. 

ಮೆಕ್ಕೆಜೋಳ ಒಡೆಯುವ ಯಂತ್ರಕ್ಕೂ ಹೆಚ್ಚಿನ ಬಾಡಿಗೆ ವಸೂಲಿ ಮಾಡಲಾಗುತ್ತಿದೆ. ಮೆಕ್ಕೆಜೋಳ ಒಡೆಯಲು ಜಿಲ್ಲಾಡಳಿತ 1,000-1,200 ರೂ. ನಿಗದಿಪಡಿಸಿದೆ. ಆದರೆ, ರೈತರಿಂದ 1,500-1,800 ರೂ.ಗಳಷ್ಟು ಹಣ ಪಡೆದುಕೊಳ್ಳಲಾಗುತ್ತಿದೆ. ಅಷ್ಟು ಅಧಿಕ ಹಣ ನೀಡಲಾಗದೇ ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳದ ಬೆಲೆ ತೀವ್ರವಾಗಿ ಕುಸಿದಿದೆ. ಸರಕಾರ ಕನಿಷ್ಟ ಬೆಂಬಲ ಬೆಲೆ ಯೋಜನೆಯಡಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಬೇಕು. ಭತ್ತದ ಬೆಲೆ ಕೂಡ ಅತಿ ಕಡಿಮೆ ಇದೆ. ಕ್ವಿಂಟಾಲ್‍ಗೆ 1,300-1,800 ರೂ.ಗಳಷ್ಟು ಇದೆ. ಇದರಿಂದ ರೈತರಿಗೆ ತೀವ್ರ ನಷ್ಟವಾಗುತ್ತಿದೆ. 

ಅಧಿಕ ಬೆಲೆಯ ಬಿತ್ತನೆ ಬೀಜ, ಗೊಬ್ಬರ, ಕಳೆ-ಕೀಟನಾಶಕ ಹಾಕಿ ಬೆಳೆ ತೆಗೆದ ರೈತನಿಗೆ ಕಡಿಮೆ ಬೆಲೆ ದೊರೆಯುತ್ತಿದ್ದು, ಖರ್ಚು ಮಾಡಿದಷ್ಟು ಹಣವೂ ವಾಪಸ್ ಬಾರದಂತಾಗಿದೆ. ಸರಕಾರ ಗಮನ ಹರಿಸಿ  ಕ್ರಮ ಜರುಗಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.

error: Content is protected !!