ಶಾಮನೂರು ಡೈಮಂಡ್ – ಶಿವಗಂಗಾ ಕಪ್
ದಾವಣಗೆರೆ, ನ.17- ದಾವಣಗೆರೆ ಇಲೆವೆನ್ಸ್ ಕ್ರಿಕೆಟ್ ಕ್ಲಬ್ ಹಾಗೂ ಜಿಲ್ಲಾ ಕ್ರೀಡಾಪಟುಗಳ ಸಾಂಸ್ಕೃತಿಕ ಸಂಘ ಇವರ ಜಂಟಿ ಆಶ್ರಯದಲ್ಲಿ 13ನೇ ಬಾರಿಗೆ ದಿ. ಪಾರ್ವತಮ್ಮ ಶಾಮನೂರು ಶಿವಶಂಕರಪ್ಪನವರ ಸವಿನೆನಪಿನ ಅಂಗವಾಗಿ ಶಾಮನೂರು ಡೈಮಂಡ್ ಹಾಗೂ ಶಿವಗಂಗಾ ಕಪ್ ರಾಷ್ಟ್ರಮಟ್ಟದ ಹೊನಲು ಬೆಳಕಿನ ಲೀಗ್ ಕಂ ನಾಕೌಟ್ ಕ್ರಿಕೆಟ್ ಟೂರ್ನಿಯನ್ನು ಇದೇ ದಿನಾಂಕ 25ರಿಂದ 29ರವರೆಗೆ 5 ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಟೂರ್ನಿಗೆ ಹೊರ ರಾಜ್ಯದ ಕೇರಳ, ಚೆನ್ನೈ, ಗೋವಾ, ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಬೆಂಗಳೂರು, ಮೈಸೂರು, ಮಂಗಳೂರು, ಉಡುಪಿ, ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಒಟ್ಟು 24 ತಂಡಗಳು ಭಾಗವಹಿಸಲಿವೆ. ವಿಶೇಷವಾಗಿ ಪೊಲೀಸ್ ತಂಡ, ಪತ್ರಕರ್ತರ ತಂಡ, ವರ್ತಕರ ತಂಡ, ಜಿಲ್ಲಾಧಿಕಾರಿಗಳ ತಂಡ, ನಗರ ಪಾಲಿಕೆ ಸದಸ್ಯರ ತಂಡ, ವಕೀಲರ ತಂಡ ಸೇರಿ ಒಟ್ಟು 8 ಅಫೀಷಿಯಲ್ ಕಪ್ ಪಂದ್ಯಾವಳಿ ನಡೆಯಲಿದೆ ಎಂದು ಕ್ರೀಡಾಪಟುಗಳ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಟೂರ್ನಿಯಲ್ಲಿ ವಿಜೇತರಿಗೆ ಪ್ರಥಮ ಸ್ಥಾನ 3 ಲಕ್ಷದ 55 ಸಾವಿರದ 555 ರೂ. ಹಾಗೂ ಶಾಮನೂರು ಡೈಮಂಡ್ ಕಪ್ ದ್ವಿತೀಯ ಸ್ಥಾನಕ್ಕೆ 2 ಲಕ್ಷದ 55 ಸಾವಿರದ 555 ರೂ. ಮತ್ತು ಶಿವಗಂಗಾ ಕಪ್ ತೃತೀಯ ಬಹುಮಾನವಾಗಿ 1 ಲಕ್ಷದ 25 ಸಾವಿರದ 555 ರೂ. ನೀಡಲಾಗುವುದು. ಆಕರ್ಷಕ ಟ್ರೋಫಿ ನೀಡಲಾಗುವುದು. ಅದೇ ರೀತಿ ವೈಯಕ್ತಿಕ ಉತ್ತಮ ಆಲ್‌ರೌಂಡರ್‌ಗೆ ಹಿರೋ ಹೊಂಡಾ ಬೈಕ್ ಅನ್ನು ನೀಡಲಾಗುವುದು.
ವಿಶೇಷವಾಗಿ ಪಂದ್ಯವನ್ನು ವೀಕ್ಷಿಸಲು ಕ್ರೀಡಾಭಿಮಾನಿಗಳಿಗೆ ಕುಳಿತು ಕೊಂಡು ನೋಡಲು ಮೈದಾನದಲ್ಲಿ ಗ್ಯಾಲರಿಯ ವ್ಯವಸ್ಥೆ ಮಾಡಲಾಗುವುದು. ಈ ಟೂರ್ನಿಯಲ್ಲಿ ಮೂರನೇ ತೀರ್ಪುಗಾರರ ವ್ಯವಸ್ಥೆಯನ್ನು ಮಾಡಲಾಗಿದ್ದು ಹಾಗೂ ಎಲ್ಲಾ ಪಂದ್ಯಾವಳಿಗಳನ್ನು ಯೂ ಟ್ಯೂಬ್‌ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಒಟ್ಟು ಈ ಟೂರ್ನಿಯ ಅಂದಾಜು ವೆಚ್ಚ 25 ರಿಂದ 30 ಲಕ್ಷ ಇದೆ. ಒಟ್ಟು 320 ಆಟಗಾರರಿಗೆ ಉಚಿತವಾಗಿ ಊಟ ಹಾಗೂ ವಸತಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಹ ಕಾರ್ಯದರ್ಶಿ ಜಯಪ್ರಕಾಶ್ ಗೌಡ, ಟಿ. ಯುವರಾಜ್, ಶಿವಣ್ಣ, ಚಂದ್ರು, ಮಧು, ಆಕಾಶ್, ರಾಘವೇಂದ್ರ, ಯೋಗೀಶ್, ಗಣೇಶ್, ವರುಣ್, ಪ್ರಕಾಶ್ ಇದ್ದರು.