ದಾವಣಗೆರೆ, ನ. 17- ಮರಾಠ ಅಭಿವೃದ್ದಿ ನಿಗಮ ರಾಜಕೀಯ ಚುನಾವಣೆ ದೃಷ್ಟಿಯಿಂದ ಮಾಡಿಲ್ಲ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ತಿಳಿಸಿದ್ದಾರೆ.
ಇಂದಿಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಸರ್ಕಾರ ಮರಾಠ ಭಾಷೆಗೆ ಆದ್ಯತೆ ಕೊಟ್ಟಿಲ್ಲ, ಸಮಾಜದವರ ಏಳಿಗೆಗೆ ಅಭಿವೃದ್ದಿಗೆ ನಿಗಮ ಮಾಡಿದೆ. ನನ್ನ ಕ್ಷೇತ್ರದಲ್ಲಿ ಸಾಕಷ್ಟು ಜನ ಮರಾಠರು ಇದ್ದಾರೆ. ಬಂಜಾರ ನಿಗಮ, ಅಂಬೇಡ್ಕರ್ ನಿಗಮ ಇದೆ, ಅದರಂತೆ ಮರಾಠ ನಿಗಮ ಇದೆ ಎಂದರು.
ಚುನಾವಣೆಗೆ ಸ್ಪರ್ಧೆ ಮಾಡಿದವರಿಗೆ ಸಚಿವ ಸ್ಥಾನ ಕೊಡಬೇಕು ಎಂಬುದು ನನ್ನ ಅಭಿಪ್ರಾಯ. ಜನರಿಂದ ಆಯ್ಕೆಯಾದವರಿಗೆ ಮಾತ್ರ ಕೊಡಬೇಕು. ಒಂದೆರೆಡು ಸ್ಥಾನ ಇರುತ್ತೆ. ಆದರೆ ಇದೇ ಪುನರಾವರ್ತನೆ ಆಗಬಾರದು. ಸಿಎಂ ದೆಹಲಿ ಪ್ರವಾಸ ಇದೆ. ಸಮತೋಲನ ಸಚಿವ ಸಂಪುಟ ಆಗುವುದು ಎಂಬ ಅಚಲ ವಿಶ್ವಾಸ ಇದೆ. ಒಬ್ಬರಿಗೆ ಕೊಡಿ ಅಂತ ಸಹಿ ಮಾಡಿಲ್ಲ. ಮಧ್ಯ ಕರ್ನಾಟಕಕ್ಕೆ ಅವಕಾಶ ಕೊಡಿ ಎಂದಿದ್ದೇವೆ. ಸಿಎಂಗೆ ಒಂದೂ ಹೆಸರು ಸೂಚನೆ ಮಾಡಿಲ್ಲ. ಯಾರಿಗೇ ಕೊಟ್ಟರೂ ವಿಶ್ವಾಸದಿಂದ ಜಿಲ್ಲೆ ಅಭಿವೃದ್ದಿ ಮಾಡುತ್ತೇವೆ. ದಾವಣಗೆರೆ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಡಬೇಕೆಂದು ಅವರು ಒತ್ತಾಯಿಸಿದರು.