ಲೇಖಕ ನಿಷ್ಠಿ ರುದ್ರಪ್ಪ
ದಾವಣಗೆರೆ, ನ.13- ಸಾಹಿತ್ಯ ಓದಿ, ಬರೆಯಲು ಅಲ್ಲ. ಅದು ಬದುಕಿಗಾಗಿ ಬೇಕು. ಸಾಹಿತ್ಯ ಬೇರೆಯಲ್ಲ. ಬದುಕು ಬೇರೆಯಲ್ಲ ಎಂಬ ಅಭಿಪ್ರಾಯವನ್ನು ಲೇಖಕ, ಬಳ್ಳಾರಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ನಿಷ್ಠಿ ರುದ್ರಪ್ಪ ವ್ಯಕ್ತಪಡಿಸಿದರು.
ಅವರು ದಾವಣಗೆರೆ ಗ್ರಂಥ ಸರಸ್ವತಿ ಪ್ರತಿಭಾರಂಗದ ವತಿಯಿಂದ ಹಮ್ಮಿಕೊಂಡಿದ್ದ `ಕನ್ನಡಕಬ್ಬ ಉಗಾದಿಹಬ್ಬ’ ಕನ್ನಡ-ಕನ್ನಡಿಗ-ಕರ್ನಾಟಕ ಕುರಿತ ಅಂತರ್ಜಾಲಿತ ಚಿಂತನಾ ಕಾರ್ಯಕ್ರಮದ 6ನೇ ದಿನದ ಉಪನ್ಯಾಸಕರಾಗಿ ಮಾತನಾಡಿದರು.
ಆದಿ ಕವಿ ಪಂಪ ಹೇಳಿದ ಹಾಗೆ ನಾನು ಸಾಹಿತ್ಯವನ್ನು ಬರೆಯುತ್ತೇನೆ. ಏಕೆಂದರೆ ಜನ ಬದುಕಲೆಂದು ಸಾಹಿತ್ಯವನ್ನು ಬರೆಯುತ್ತೇನೆ. ಪ್ರಾಣಿ-ಪಕ್ಷಿಗಳ ಹಾಗೂ ಮಾನವನ ಬದುಕು ಕೇವಲ ಜೀವಿಸಿ ಸಾಯೋದಕ್ಕೆ ಅಲ್ಲ. ತಾವು ಬದುಕಿದ ರೀತಿ ನಾವು ಸಮಾಜಕ್ಕೆ ಕೊಟ್ಟ ಕೊಡುಗೆ ಉಳಿಯಬೇಕು ಎಂದು ಜನಪದ ಸಾಹಿತ್ಯ ಹೇಳುತ್ತದೆ ಎಂದರು.
ಮಂಕುತಿಮ್ಮನ ಕಗ್ಗ, ರಾಮಾಯಣ, ಮಹಾಭಾರತ ಮಹಾಕಾವ್ಯಗಳು, ಜಾನಪದ ಕಾವ್ಯಗಳನ್ನು ವಾಚಿಸಿ, ಉದಾಹರಣೆ ಸಹಿತ ತಿಳಿಸುವ ಮೂಲಕ ಚಿಂತನೆಗೆ ಹಚ್ಚಿದರು.
ಗ್ರಂಥ ಸರಸ್ವತಿ ಪ್ರತಿಭಾರಂಗದ ಅಧ್ಯಕ್ಷ ಆರ್. ಶಿವಕುಮಾರಸ್ವಾಮಿ ಕುರ್ಕಿ ಸ್ವಾಗತಿಸಿದರು. ಸುಶ್ರಾವ್ಯ ಸಂಗೀತ ಶಾಲೆಯ ಯಶಾ ದಿನೇಶ್ ಹಾಗೂ ಟಿ.ಆರ್. ಹೇಮಂತಕುಮಾರ್ ಭಾವಗೀತೆಗಳನ್ನು ಹಾಡಿದರು. ಐಶ್ವರ್ಯ ವೈ. ಶ್ರವಣ್ ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು.