ಸಾಂಸ್ಕೃತಿಕ ಸಂಘಗಳಿಗೆ ಸಹಾಯ ಧನ ನೀಡಲು ಒತ್ತಾಯ

ದಾವಣಗೆರೆ, ನ.11- ನಾಡಿನ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ಧನ ಸಹಾಯ ನೀಡುವಂತೆ ಹಾಗೂ ಜಿಲ್ಲಾಡಳಿತಕ್ಕೆ ಪ್ರಾಯೋಜನೆ ನೀಡಲು ಸೂಚನೆ ನೀಡುವಂತೆ ಹವ್ಯಾಸಿ ಗ್ರಾಮೀಣ ವಿವಿಧ ಕಲಾ ಪ್ರಕಾರಗಳ ಕಲಾವಿದರ ಒಕ್ಕೂಟದ ಜಿಲ್ಲಾ ಘಟಕ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಜಿಲ್ಲಾಧ್ಯಕ್ಷ ಎನ್.ಎಸ್. ರಾಜು,  ಕಳೆದ ಎರಡು ವರ್ಷಗಳಿಂದ ಸಾಂಸ್ಕೃತಿಕ ಸಂಘ ಸಂಸ್ಥೆಗಳಿಗೆ ನೀಡುತ್ತಿದ್ದ ಧನ ಸಹಾಯ ವನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಕಲಾವಿದರು ತೀವ್ರ ಸಂಕಷ್ಟಕ್ಕೀಡಾಗಿ ದ್ದಾರೆ. ಕೂಡಲೇ ಧನ ಸಹಾಯ ನೀಡಬೇಕು ಎಂದು ಹೇಳಿದರು.

ಕಲಾವಿದರು ನಾಡಿನ ಸಾಂಸ್ಕೃತಿಕ ರಾಯಭಾರಿಗಳು. ಇಂತಹ ಸಂಸ್ಕೃತಿಯ ಉಳಿವಿಗೆ ಪ್ರಯತ್ನಿಸುವ ಸಾಂಸ್ಕೃತಿಕ ಸಂಘ-ಸಂಸ್ಥೆಗಳು ಅನುದಾನವಿಲ್ಲದೆ ಸೊರಗಿ ಹೋಗಿವೆ. ಇದರಿಂದ ಸ್ಥಳೀಯ ಇಲಾಖೆಯಿಂದ ನೂರಾರು ಕಲಾ ವಿದರಿಗೆ ಸಿಗುವ ಪ್ರಯೋಜನೆ ಇಲ್ಲವಾಗಿದೆ ಎಂದರು.

ಕೋವಿಡ್ ಕಾರಣದಿಂದ ಸಾಂಸ್ಕೃತಿಕ ಸಂಘ-ಸಂಸ್ಥೆಗಳು, ವೃತ್ತಿ ರಂಗಭೂಮಿ, ಜಾನಪದ, ಬಯಲಾಟ ಸೇರಿದಂತೆ ವಿವಿಧ ಬಗೆಯ ಕಲಾವಿದ ರು ಕುಗ್ಗಿ ಹೋಗಿದ್ದಾರೆ. ಇದೀಗ ಕೊರೊನಾ ಸೋಂಕು ಕಡಿಮೆಯಾಗಿದ್ದು ಸರ್ಕಾರವು ಸರಳವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.

ಸಹಾಯಧನ ಹೆಚ್ಚಳಕ್ಕೆ ಮನವಿ: ನಾಟಕ ಪ್ರದರ್ಶನಕ್ಕೆ ಸರ್ಕಾರ 35 ಸಾವಿರ ರೂ. ನೀಡುತ್ತಿದೆ. ಈ ಹಣದಿಂದ ನಾಟಕ ಪ್ರದರ್ಶನದ ವೆಚ್ಚ ಭರಿಸುವುದು ಕಷ್ಟ. ಆದ್ದರಿಂದ ಕನಿಷ್ಟ 60 ಸಾವಿರ ಹಾಗೂ ಕಲಾ ತಂಡಗಳಿಗೆ ನೀಡುತ್ತಿದ್ದ 20 ಸಾವಿರ ರೂ.ಗಳ ಬದಲಾಗಿ 30 ಸಾವಿರ ರೂ.ಗಳನ್ನು ಹೆಚ್ಚಳ ಮಾಡಿ ನೀಡುವಂತೆ ಅವರು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕಲಾವಿದರುಗಳಾದ ಹೆಚ್.ಮೆಹಬೂಬ್ ಅಲಿ, ಬಿ.ಹನುಮಂತಾಚಾರಿ, ಬಿ.ಇ. ತಿಪ್ಪೇಸ್ವಾಮಿ, ಬಲ್ಲೂರು ಮಂಜಪ್ಪ, ಜಿ.ಮೂಗಬಸಪ್ಪ ಉಪಸ್ಥಿತರಿದ್ದರು.

error: Content is protected !!