ಮಹಿಳೆಯರ ಬಗ್ಗೆ ಅವಹೇಳನ; ಬಿಜೆಪಿ ಮುಖಂಡ ಅಂಜಿನಪ್ಪ ಬಂಧನ

ಜಗಳೂರು, ನ.9- ಬಿಜೆಪಿ ಒಬಿಸಿ ಘಟಕದ ಜಿಲ್ಲಾ ಉಪಾಧ್ಯಕ್ಷ ಚಿಕ್ಕಉಜ್ಜನಿ ಟೈಗರ್ ಅಂಜಿನಪ್ಪ ಸಾಗರ ಮೇಲೆ ಜಾತಿ ನಿಂದನೆ ಮತ್ತು ಸಮಾಜಗಳ ನಡುವೆ ಶಾಂತಿ ಕದಡುವ ಮೊಬೈಲ್ ಸಂಭಾಷಣೆಯೊಂದು ವೈರಲ್ ಆಗಿದ್ದು,  ಚಿಕ್ಕಉಜ್ಜನಿ ಗ್ರಾಮದ ದುರುಗಮ್ಮ ನೀಡಿದ ದೂರಿನ  ಹಿನ್ನೆಲೆಯಲ್ಲಿ  ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಮೊಬೈಲ್‌ನಲ್ಲಿ ವ್ಯಕ್ತಿಯೊಬ್ಬರೊಂದಿಗಿನ ಸಂಭಾಷಣೆಯು  ಅಂತರ್ಜಾಲ ದಲ್ಲಿ ವೈರಲ್ ಆದ ಹಿನ್ನೆಲೆಯಲ್ಲಿ ಜಾತಿ ನಿಂದನೆ, ಮಹಿಳೆಯರ ಮೇಲೆ ಅಶ್ಲೀಲ ಪದಗಳ ಬಳಕೆ ಮತ್ತು ಸಮಾಜಗಳ ನಡುವೆ ಶಾಂತಿ ಕದಡುವಂತಹ ಮಾತುಗಳನ್ನಾಡಿದ್ದು ಇದರ ಆಧಾರದ ಮೇಲೆ ದೂರು ದಾಖಲಾಗಿದೆ.

ತಾಲ್ಲೂಕಿನ ವಿವಿಧ ಸಮಾಜಗಳ ಮುಖಂಡರು ಹಾಗೂ ಸಂಘಟನೆಗಳ ಮುಖಂಡರುಗಳು ನಿನ್ನೆ ಪೊಲೀಸ್ ಠಾಣೆಗೆ ಆಗಮಿಸಿ, ಅಂಜಿನಪ್ಪ ಅವರನ್ನು ಬಂಧಿಸಿ ಗಡೀಪಾರು ಮಾಡಬೇಕೆಂದು ಒತ್ತಾಯಿಸಿದ್ದರು.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಡಿವೈಎಸ್ಪಿ ನರಸಿಂಹ ತಾಮ್ರಧ್ವಜ, ಸಿಪಿಐ ದುರುಗಪ್ಪ, ಪಿಎಸ್‍ಐ ಉಮೇಶ್ ಬಾಬು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಪಿ.ಮಹೇಶ್ವರಪ್ಪ ಆಗಮಿಸಿ ಪರಿಶೀಲಿಸಿದರು. ಈ ವೇಳೆ ವೀರಶೈವ ಸಮಾಜದ ತಾಲ್ಲೂಕು ಅಧ್ಯಕ್ಷ ಶಿವನಗೌಡ, ಡಿ.ಎಸ್.ಎಸ್ ಸಂಚಾಲಕ ಸತೀಶ್, ಸ್ವಾಮಿ, ಮಡಿವಾಳ ಸಮಾಜದ ಅಧ್ಯಕ್ಷರು, ಚಿಕ್ಕ ಉಜ್ಜನಿ ಗ್ರಾಮದ ಗ್ರಾಮಸ್ಥರಿದ್ದರು. 

ಬಿಜೆಪಿಯಿಂದ ಉಚ್ಚಾಟನೆ: ಬಿಜೆಪಿಯ ಒಬಿಸಿ ಘಟಕದ ಜಿಲ್ಲಾ ಉಪಾಧ್ಯಕ್ಷರಾಗಿದ್ದ ಚಿಕ್ಕಉಜ್ಜನಿ ಟೈಗರ್ ಅಂಜಿನಪ್ಪನನ್ನು ಬಿಜೆಪಿ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಹನಗವಾಡಿ ವೀರೇಶ್ ಆದೇಶ ಹೊರಡಿಸಿದ್ದಾರೆ ಎಂದು ಜಗಳೂರು ಮಂಡಲ ಅಧ್ಯಕ್ಷ ಹೆಚ್.ಸಿ.ಮಹೇಶ್ ತಿಳಿಸಿದ್ದಾರೆ.

error: Content is protected !!