ದಾವಣಗೆರೆ, ನ.7- ‘ಜಾನಪದ ಸಾಹಿತ್ಯ’ ಅತ್ಯಮೂಲ್ಯವಾದ ಮಾನವೀಯ ಮೌಲ್ಯವುಳ್ಳ ಶತ ಶತಮಾನಗಳಿಂದ ಜನರ ಬಾಯಿಂದ ಬಾಯಿಗೆ ಹರಿದು, ಎಲ್ಲ ಕನ್ನಡಿಗರ ಮನದಾಳದಲ್ಲಿ ಮನೆ ಮಾಡಿರುವ ಸಾಹಿತ್ಯ ಎಂದು ಶ್ರೀಮತಿ ಸರ್ವಮಂಗಳಮ್ಮ ಮಾಗನೂರು ಬಸಪ್ಪ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಅನಿತಾ ಹೆಚ್. ದೊಡ್ಡಗೌಡರ್ ತಿಳಿಸಿದರು.
ನಗರದ ಗ್ರಂಥ ಸರಸ್ವತಿ ಪ್ರತಿಭಾ ರಂಗವು ರಾಜ್ಯೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಅಂತರ್ಜಾಲ ಕನ್ನಡ ಕಬ್ಬ, ಉಗಾದಿ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು `ಜಾನಪದ ಸಾಹಿತ್ಯದಲ್ಲಿರುವ ಮೌಲ್ಯಯುತ ಅಂಶಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.
ಜಾನಪದ ಸಾಹಿತ್ಯದಲ್ಲಿ ‘ಸ್ತ್ರೀ’ ಹೇಗೆ ತನ್ನ ದೈನಂದಿನ ದಿನಗಳಲ್ಲಿ ಸಂಸ್ಕಾರವುಳ್ಳ ಜೀವನ ಸಾಗಿಸಿ, ಹುಟ್ಟಿದ ಮನೆಗೂ, ಕೊಟ್ಟ ಮನೆಗೂ ಹೆಸರು ತರುವಂತೆ ಬಾಳಿದ್ದಳು ಎಂಬುದನ್ನು ಜಾನಪದ ಗೀತೆಗಳೊಂದಿಗೆ ಎಳೆಎಳೆಯಾಗಿ ವಿಮರ್ಶಿಸಿ, ಜಾನಪದ ಸಾಹಿತ್ಯದಲ್ಲಿ ಯಾವ ಸಾಲಿನಲ್ಲಿಯೂ ದ್ವೇಷ, ಅಸೂಯೆ, ಸ್ವಾರ್ಥ ಇರದೇ, ಬರೀ ಸ್ತ್ರೀಯಲ್ಲಿ ತ್ಯಾಗ, ಪ್ರೀತಿ, ಕರುಣೆಯ ಪ್ರತಿರೂಪದ ದರ್ಶನವಾಗುತ್ತದೆ ಎಂದವರು ಉದಾಹರಣೆಯೊಂದಿಗೆ ಪ್ರತಿಪಾದಿಸಿದರು.
ಜಾನಪದ ಸಾಹಿತ್ಯದಲ್ಲಿ ಹೆಣ್ಣು ತನ್ನ ತವರು, ತಂದೆ- ತಾಯಿಗಳ ಮೇಲಿರುವ ಪ್ರೀತಿ, ಅಣ್ಣ-ತಮ್ಮಂದಿರ ಮೇಲಿನ ಅಭಿಮಾನದ ಜೊತೆಗೆ, ಗಂಡನ ಮನೆಯ ಕರ್ತವ್ಯ ಪ್ರಜ್ಞೆ, ಪರಿಸರ ಹಾಗೂ ಪ್ರಾಣಿ-ಪಕ್ಷಿಗಳೊಂದಿಗಿನ ಅವಿನಾಭಾವ ಸಂಬಂಧದ ಮಾಧುರ್ಯವನ್ನು ಜಾನಪದ ಗೀತೆಗಳ ಸಾಲುಗಳನ್ನು ಮಧುರವಾಗಿ ಹಾಡುತ್ತಾ ವಿವರಿಸಿದರು. ಇದೆಲ್ಲದರ ಜೊತೆಗೆ ‘ಕೆರೆಗೆ ಹಾರ’ ಸಾಹಿತ್ಯದಲ್ಲಿರುವ ಸಾಮಾಜಿಕ ಕಳಕಳಿಯನ್ನು ವರ್ಣಿಸಿದರು.
ಜಾನಪದ ಸಾಹಿತ್ಯ ಎಲ್ಲ ಪಠ್ಯ ಪುಸ್ತಕಗಳಲ್ಲಿ ಗೀತೆಗಳ ಮೂಲಕ, ಲೇಖನಗಳ ಮೂಲಕ, ನಮ್ಮ ಇಂದಿನ ಪೀಳಿಗೆಯವರಿಗೆ ಅದರ ಅರಿವು ಮೂಡಿಸುವ ಪ್ರಯತ್ನವನ್ನು ಶಿಕ್ಷಣ ವ್ಯವಸ್ಥೆ ಮಾಡಿದಾಗ ಆ ಸಾಹಿತ್ಯದ ವರ್ಗಾವಣೆ ಮುಂದಿನ ಪೀಳಿಗೆಯವರಿಗೂ ಕೊಂಡೊಯ್ಯಬಹುದು ಎಂದು ಅನಿತಾ ಅವರು ಅಭಿಪ್ರಾಯಪಟ್ಟರು.
ಕು. ಅನನ್ಯ ಸ್ವಾಗತಿಸಿದರು. ಶ್ರೀಮತಿ ಯಶಾ ದಿನೇಶ್ ಸುಮಧುರವಾಗಿ ಕನ್ನಡ ಗೀತೆಯನ್ನು ಹಾಡಿದರು. ಇದೇ ಕಾರ್ಯಕ್ರಮದಲ್ಲಿ ಬಳ್ಳಾರಿಯ ಚಿಂತನಕಾರ್ತಿ ಸುಮಂಗಳ ಶಿವಕುಮಾರ್ ಬಳಿಗಾರ್ ಅವರು `ಗುಬ್ಬಿ ಎರವರ ಮನೆಯ ತನ್ನದೆಂಬಂತೆ’ ವಿಷಯ ಕುರಿತು ಉಪನ್ಯಾಸ ನೀಡಿದರು.