ಹಿರಿಯ ಸಂಶೋಧಕ ಡಾ.ಬುರುಡೆಕಟ್ಟೆ ಮಂಜಪ್ಪ
ದಾವಣಗೆರೆ, ನ.7- ಸರ್ವಜ್ಞ ಒಬ್ಬ ಮೇರು ಕವಿ, ದಾರ್ಶನಿಕ. ಬಸವಾದಿ ಪ್ರಥಮರ ಮುಂದಿನ ವಾರಸು ದಾರ ಎಂದು ಕರೆಯಲಾಗುತ್ತದೆ ಎಂದು ಹಿರಿಯ ಸಂಶೋಧಕ ಡಾ.ಬುರುಡೆಕಟ್ಟೆ ಮಂಜಪ್ಪ ಹೇಳಿದರು.
ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 65ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಅಂತರ್ಜಾಲ ಮೂಲಕ ಬಿತ್ತರಗೊಂಡ 6ನೇ ದಿನದ ಕನ್ನಡ ನುಡಿ ಹಬ್ಬ ಕಾರ್ಯಕ್ರಮದಲ್ಲಿ `ಸರ್ವಜ್ಞರ ಬದುಕು-ಬರಹ’ ಕುರಿತು ಅವರು ಉಪನ್ಯಾಸ ನೀಡಿದರು.
ತ್ರಿಪದ ಕವಿ, ತ್ರಿಪದಿ ಸಾರ್ವಭೌಮ ಕವಿ ಎನಿಸಿ ಕೊಳ್ಳುವ ಸರ್ವಜ್ಞರು ಜಾನಪದ ಪ್ರಕಾರದ ತ್ರಿಪದಿಗೆ ಮೇರು ಸ್ಥಾನ ಕಲ್ಪಿಸಿದವರು ಎಂದು ಹೇಳಿದರು.
ಕಪ್ಪೆ ಆರ್ಯಭಟನ ಶಾಸನದಲ್ಲಿ ತ್ರಿಪದಿ ಮೊದಲ ಬಾರಿಗೆ ಉಲ್ಲೇಖವಾಗಿದೆ. ಅತ್ಯಂತ ಕೆಳಮಟ್ಟದ ವ್ಯಕ್ತಿ ಯನ್ನು ಶ್ರೇಷ್ಟ ಮಟ್ಟದಲ್ಲಿ ನೋಡುವಂತಹ ಮಹಾ ದಾರ್ಶನಿಕ ಸರ್ವಜ್ಞ ಎಂದು ಅವರು ಬಣ್ಣಿಸಿದರು.
ಸಿದ್ದವೀರಣ್ಣಾರ್ಯ ಎಂಬುವವರು ಹಸ್ತ ಪ್ರತಿಯ ಸಂಪಾದಕರು. ಅವರು ಸರ್ವಜ್ಞರ ತ್ರಿವಿಧಗಳು ಎಂಬ ಸುಮಾರು 250 ವಚನಗಳನ್ನು ಸಂಪಾದಿಸಿದ್ದಾರೆ. ಆದರೆ 1560ರ ರಲ್ಲಿ ಸರ್ವಜ್ಞರ ವಚನಗಳು ದೊರೆತಿರುವುದರಿಂದ ಇವರ ಕಾಲಘಟ್ಟ ಸಾಮಾನ್ಯವಾಗಿ 1520 ಇರಬಹುದು ಎಂದು ದೊರೆತಿರುವ ಕೆಲವು ಆಧಾರಗಳ ಮೂಲಕ ನಿರ್ಣಯಿಸಲಾಗಿದೆ ಎಂದರು.
ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಬಿ. ವಾಮದೇವಪ್ಪ ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಸರ್ವಜ್ಞನೆಂಬುವರು ಗರ್ವದಿಂದಾದವನೇ ಸರ್ವರೊಳು ಒಂದೊಂದು ನುಡಿ ಕಲಿತು ವಿದ್ಯೆಯ ಪರ್ವತವೇ ಆದ ಸರ್ವಜ್ಞ ಎಂದು ಮಹಾನ್ ಕವಿಯನ್ನು ಸ್ಮರಣೆ ಮಾಡುವುದರ ಜೊತೆಗೆ ಅವರ ಆದರ್ಶದ ತ್ರಿಪದಿಗಳು ಅಂದಿನ ಕಾಲಕ್ಕೆ ಅಲ್ಲದೇ, ಇಂದಿನ ವರ್ತಮಾನ ಕಾಲಕ್ಕೂ ಸಂಜೀವಿನಿಗಳಾಗಿವೆ ಎಂದು ಹೇಳಿದರು.
ಆರಂಭದಲ್ಲಿ ಕದಳಿ ಮಹಿಳಾ ವೇದಿಕೆಯ ಶಾರದಾಂಬ ತಂಡದ ಸೌಮ್ಯ ಸತೀಶ್, ನಿರ್ಮಲ ಶಿವಕುಮಾರ್, ನಂದಿನಿ ಗಂಗಾಧರ್ ಸುಗಮ ಸಂಗೀತ ನಡೆಸಿಕೊಟ್ಟರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಬಿ.ದಿಳ್ಯಪ್ಪ ಸ್ವಾಗತಿಸಿದರು.