ಕೆ.ಪಿ. ನಂಜುಂಡಿ ಹೇಳಿಕೆಗೆ ಸ್ವರ್ಣಕಾರ ಸಂಘದ ಖಂಡನೆ

ದಾವಣಗೆರೆ, ನ.7- ದೈವಜ್ಞ ಬ್ರಾಹ್ಮಣ ಸಮಾಜದ ಬಗ್ಗೆ ವಿಧಾನಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಹಗುರವಾಗಿ ಹೇಳಿಕೆ ನೀಡಿರುವುದು ಖಂಡನೀಯ. ಅವರು ಸಮಾಜದ ಕ್ಷಮೆ ಕೇಳಬೇಕು ಎಂದು ಕರ್ನಾಟಕ ಸ್ವರ್ಣಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್‌ ಡಿ. ರಾಯ್ಕರ್‌ ಒತ್ತಾಯಿಸಿದರು.

ದೈವಜ್ಞರು ಮುದ್ದೆ ಕದಿಯುವವರು, ಅವರನ್ನು ವಿಶ್ವಕರ್ಮ ನಿಗಮದಿಂದ ಕಿತ್ತೊಗೆಯಬೇಕು. ಪ್ರವರ್ಗ 2ಎ ಮಾನ್ಯತೆ ಕಿತ್ತುಕೊಳ್ಳಬೇಕು ಎಂದು  ನಂಜುಂಡಿ ಹೇಳಿರುವುದು ಖಂಡನೀಯ ಎಂದು ಅವರು ತಿಳಿಸಿದರು.

ಸಮಾಜದ ಮುಖಂಡ, ಬಿಜೆಪಿ ಯುವ ಮೋರ್ಚಾ (ಉತ್ತರ ವಲಯ) ಅಧ್ಯಕ್ಷ ಸಚಿನ್‌ ವೆರ್ಣೇಕರ್, ನಂಜುಂಡಿ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸುತ್ತಿದ್ದಾರೆ, ಇದು ಖಂಡನೀಯ. ದೈವಜ್ಞ ಸಮಾಜವನ್ನು ಪ್ರವರ್ಗ `2ಎ’ ಯಿಂದ ತೆಗೆಯುವಂತೆ ಹೇಳಲು ಅವರಿಗೆ ಏನು ಅಧಿಕಾರವಿದೆ? ಅವರನ್ನು ನಮ್ಮ ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಹಯಗ್ರೀವ ದೈವಜ್ಞ ಯುವ ವೇದಿಕೆ ಕಾರ್ಯದರ್ಶಿ ಯೋಗರಾಜ್ ಅಣ್ವೇಕರ್‌, ದೈವಜ್ಞ ಬ್ರಾಹ್ಮಣ ಸಮಾಜದ ನಿರ್ದೇಶಕ ಪ್ರಕಾಶ್‌ ಎಲ್‌. ದೈವಜ್ಞ ಚಿನ್ನ, ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಜಗನ್ನಾಥ ವೆರ್ಣೇಕರ್ ಇದ್ದರು.

error: Content is protected !!