ಸಿಇಟಿ ಅರ್ಜಿಗಳಲ್ಲಿನ ವಿವರ ತಿದ್ದುಪಡಿಗೆ ಅವಕಾಶವಿಲ್ಲದೇ ತೊಡಕು

ದಾವಣಗೆರೆ, ನ. 8 – ಕಳೆದ ಸಿಇಟಿ -2020 ಪರೀಕ್ಷೆಗಾಗಿ ಸಲ್ಲಿಸಿದ್ದ ಅರ್ಜಿಗಳಲ್ಲಿನ ವಿವರಗಳನ್ನು ತಿದ್ದುಪಡಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅವಕಾಶ ನೀಡಿಲ್ಲ ಹಾಗೂ ದಾಖಲೆಗಳ ಅಪ್‌ಲೋಡ್ ಸಮಯದಲ್ಲಿ ಆಗುತ್ತಿರುವ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ತೆಗೆದುಕೊಂಡಿಲ್ಲ. ಇದರಿಂದಾಗಿ ನೂರಾರು ವಿದ್ಯಾರ್ಥಿಗಳ ವೈದ್ಯಕೀಯ ಪ್ರವೇಶಕ್ಕೆ ಸಮಸ್ಯೆಯಾಗಿದೆ ಎಂದು ಶಿವಮೊಗ್ಗದ ಪ್ರಗತಿ ಆಪಲ್ ಎಜುಕೇಷನ್‌ನ ಬಿ.ವಿಜಯಕುಮಾರ್ ದೂರಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹರಪನಹಳ್ಳಿ ತಾಲ್ಲೂಕಿನ ಕೆರೆಗುಡಿಹಳ್ಳಿಯ ಜಿ.ವಿ. ಸಿಂಧು ಎಂಬುವವರ ಉದಾಹರಣೆ ನೀಡಿ, ಇವರು ಹೈದರಾಬಾದ್ ಕರ್ನಾಟಕ ಪ್ರಾಂತ್ಯಕ್ಕೆ ಸೇರಿದ್ದು ಮೀಸಲಾತಿಗೆ ಅರ್ಹರಾಗಿದ್ದರೂ ಪ್ರಮಾಣ ಪತ್ರ ತಿರಸ್ಕರಿಸಲಾಗಿದೆ. ಈ ತೊಡಕು ಬಗೆಹರಿಸಿಕೊಳ್ಳಲು ಪ್ರಾಧಿಕಾರ ಸ್ಪಂದಿಸುತ್ತಿಲ್ಲ ಎಂದು ತಿಳಿಸಿದರು.

ಇಂತಹ ಸಮಸ್ಯೆಗಳ ಬಗ್ಗೆ ಪ್ರಾಧಿಕಾರದ ಸಿ.ಇ.ಟಿ. ಸೆಲ್‌ಗೆ ದೂರವಾಣಿ ಕರೆ ಮಾಡಿದರೂ ಸ್ವೀಕರಿಸುತ್ತಿಲ್ಲ. ಇ-ಮೇಲ್‌ಗೂ ಉತ್ತರಿಸುತ್ತಿಲ್ಲ. ಮತ್ತೊಂದೆಡೆ ಕೇಂದ್ರದ ಎನ್.ಟಿ.ಎ. ನಡೆಸಿದ ನೀಟ್ ಪರೀಕ್ಷೆಯ ಅರ್ಜಿಯಲ್ಲಿನ ತಪ್ಪುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ನಾಲ್ಕು ದಿನಗಳ ಸಮಯ ನೀಡಲಾಗಿತ್ತು ಎಂದು ಹೇಳಿದರು.

ನೀಟ್ ಮಾದರಿಯಲ್ಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಹ ಅರ್ಜಿಗಳಲ್ಲಿನ ಮಾಹಿತಿಗಳನ್ನು ಸರಿಪಡಿಸಿಕೊಳ್ಳಲು ಹಾಗೂ ತಾಂತ್ರಿಕ ಕಾರಣಗಳಿಗಾಗಿ ಆದ ಸಣ್ಣ ಪುಟ್ಟ ತಪ್ಪುಗಳನ್ನು ತಿದ್ದಿಕೊಳ್ಳಲು ಎರಡು ದಿನಗಳ ಕಾಲವಾದರೂ ಸಮಯಾವಕಾಶ ನೀಡಬೇಕು.  ಇಲ್ಲವಾದಲ್ಲಿ ವಿದ್ಯಾರ್ಥಿಗಳ ಪರಿಶ್ರಮ ವ್ಯರ್ಥವಾಗುತ್ತದೆ ಎಂದು ವಿಜಯಕುಮಾರ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ವಿದ್ಯಾರ್ಥಿನಿ ಜಿ.ವಿ. ಸಿಂಧು ಉಪಸ್ಥಿತರಿದ್ದರು.

 

error: Content is protected !!