ಮಲೇಬೆನ್ನೂರು ಪುರಸಭೆ : ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆಗೆ ತೀರ್ಮಾನ

ಮಲೇಬೆನ್ನೂರು ಪುರಸಭೆ : ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಕೆಗೆ ತೀರ್ಮಾನ - Janathavaniಮಲೇಬೆನ್ನೂರು, ನ.5- ಇಲ್ಲಿನ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದ್ದು, ಅಧ್ಯಕ್ಷ-ಉಪಾಧ್ಯಕ್ಷರು ಯಾರಾಗುತ್ತಾರೆಂಬುದು ಗುರುವಾರ ರಾತ್ರಿವರೆಗೂ ನಿಗೂಢವಾಗಿತ್ತು.

ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದು, ನಾಳೆ ಶುಕ್ರವಾರ ಬೆಳಿಗ್ಗೆ 10.30 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ತಹಶೀಲ್ದಾರ್‌ ಕೆ.ಬಿ. ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಹೊಂದಾಣಿಕೆ ಗೊಂದಲ : ಈ ಹಿಂದೆ ಎರಡೂವರೆ ವರ್ಷ ಪುರಸಭೆಯಲ್ಲಿ  ಜೆಡಿಎಸ್-ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ನಡೆಸಿದ್ದರು. ಅಂದು ಅಧ್ಯಕ್ಷ ಸ್ಥಾನ ಎಸ್ಸಿ ಮಹಿಳೆಗೆ ಮೀಸಲಾಗಿದ್ದರಿಂದ ಜೆಡಿಎಸ್‌ನ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯವಾಗಿದ್ದರಿಂದ ಬಿಜೆಪಿಯ ಬಿ.ಎಂ. ಚನ್ನೇಶ್‌ಸ್ವಾಮಿ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು.

ಹಿಂದಿನ ಒಪ್ಪಂದದಂತೆ ಈಗ ಬಿಜೆಪಿಗೆ ಅಧ್ಯಕ್ಷ ಸ್ಥಾನ ಮತ್ತು ಜೆಡಿಎಸ್‌ಗೆ ಉಪಾಧ್ಯಕ್ಷ ಹಂಚಿಕೆ ಆಗಬೇಕಿತ್ತು. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹರಿಹರ ನಗರಸಭೆಯಲ್ಲಿ ಜೆಡಿಎಸ್‌ಗೆ ನಾವು ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದೇವೆ. ಇಲ್ಲಿ ನಮಗೆ ಅಧ್ಯಕ್ಷ ಸ್ಥಾನ ಕೊಡಿ ಎಂದು ಶಾಸಕ ಎಸ್‌. ರಾಮಪ್ಪ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ಪಟ್ಟುಹಿಡಿದರು. ಇದಕ್ಕೆ ಒಪ್ಪದ ಜೆಡಿಎಸ್‌ ಮುಖಂಡರು ಹಾಗೂ ಸದಸ್ಯರು ಅಧ್ಯಕ್ಷ ಸ್ಥಾನವನ್ನು  ಮೊದಲ 2 ತಿಂಗಳು ನಮಗೆ ಕೊಡಿ. ನೀವು ಉಪಾಧ್ಯಕ್ಷ ಸ್ಥಾನ ಹಾಗೂ ಸ್ಥಾಯಿ ಸಮಿತಿ ತೆಗೆದುಕೊಳ್ಳಿ. 2 ತಿಂಗಳ ನಂತರ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆೆ ಬಿಟ್ಟುಕೊಡುತ್ತೇವೆ ಎಂಬ ಬೇಡಿಕೆ ಇಟ್ಟರು.

ಈ ಕುರಿತು ಕಾಂಗ್ರೆಸ್‌-ಜೆಡಿಎಸ್‌ ಮುಖಂಡರ ಮಾತುಕತೆಗಳು ಕಳೆದ ಒಂದು ವಾರದಿಂದ ನಡೆದುಕೊಂಡು ಬಂದಿದ್ದವು. ಗುರುವಾರ ಸಂಜೆ ಶಾಸಕ ಎಸ್‌.ರಾಮಪ್ಪ ಅವರು ಸ್ವತಃ ಮಲೇಬೆನ್ನೂರಿಗೆ ಬಂದು ಸದಸ್ಯರನ್ನು ಒಪ್ಪಿಸಿ ಮೊದಲ 3 ತಿಂಗಳು ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ನೀಡುವ ತೀರ್ಮಾನ ಕೈಗೊಂಡರು. 

ಜಿಲ್ಲಾ ಜೆಡಿಎಸ್‌ ಅಧ್ಯಕ್ಷ ಬಿ. ಚಿದಾನಂದಪ್ಪ ಅವರಿಗೆ ವಿಷಯ ತಿಳಿಸಿದರು. ಆದರೆ ಆ ವೇಳೆಗಾಗಲೇ ಜೆಡಿಎಸ್‌ ಸದಸ್ಯರು ಬಿಜೆಪಿ ಜೊತೆಯಲ್ಲೇ ಹೊಂದಾಣಿಕೆ ಮುಂದುವರೆಸಲು ಮತ್ತು ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಬಿಜೆಪಿ ಒಪ್ಪಿದೆ ಎಂಬ ಮಾಹಿತಿ ಲಭ್ಯವಾಯಿತು ಎನ್ನಲಾಗಿದೆ.

ಬಿಜೆಪಿ ಮುಖಂಡ ಹಾಗೂ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಅವರು ಈ ಹಿಂದಿನ ಮಾತುಕತೆಯ ಪ್ರಕಾರ ಅಧ್ಯಕ್ಷ ಸ್ಥಾನ ನಮಗೆ ಕೊಡಿ. ನಾವು-ನೀವು ಹೊಂದಾಣಿಕೆಯಿಂದ ಹೋಗೋಣ ಎಂಬ ಮಾತನ್ನು ಜೆಡಿಎಸ್‌ ಮುಖಂಡರ ಬಳಿ ಚರ್ಚಿಸಿದ್ದರು.

ಆಗ ಜೆಡಿಎಸ್‌ ಮುಖಂಡರು ಹರಿಹರ ನಗರಸಭೆಯಲ್ಲಿ ಕಾಂಗ್ರೆಸ್‌ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ಅಲ್ಲಿ ಅವರು ನಮಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿದ್ದಾರೆ. ಇಲ್ಲಿ ನಾವು ಅವರಿಗೆ ಬಿಟ್ಟುಕೊಡಬೇಕು. ಈ ಬಗ್ಗೆ ಸದಸ್ಯರ ಜೊತೆ ಮಾತನಾಡಿ, ಅಭಿಪ್ರಾಯ ತಿಳಿಸುತ್ತೇವೆ ಎಂದಿದ್ದರು. ಆದರೆ ಜೆಡಿಎಸ್‌ ಸದಸ್ಯರು ಅಧ್ಯಕ್ಷ ಸ್ಥಾನ ಕೊಡುವವರ ಜೊತೆ ನಾವು ಹೋಗುತ್ತೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದಾಗ, ಗುರುವಾರ ರಾತ್ರಿ ಜಿ.ಪಂ. ಸದಸ್ಯ ಬಿ.ಎಂ. ವಾಗೀಶ್‌ಸ್ವಾಮಿ ಹಾಗೂ ಬಿಜೆಪಿ ಸದಸ್ಯರು ಮೊದಲ 2 ತಿಂಗಳು ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಲು ಒಪ್ಪಿಕೊಳ್ಳುವ ಮೂಲಕ ಹಿಂದಿನ ಮೈತ್ರಿ ಮುಂದುವರೆಸಿಕೊಂಡು ಹೋಗಲು ನಿರ್ಧರಿಸಿದ್ದಾರೆ ಎಂದು ಹೇಳಲಾಗಿದೆ.

2 ತಿಂಗಳ ನಂತರ ಉಳಿದ 4 ತಿಂಗಳು ಬಿಜೆಪಿಗೆ ಅಧ್ಯಕ್ಷ ಸ್ಥಾನ ಮತ್ತು ಉಪಾಧ್ಯಕ್ಷ ಪೂರ್ತಿ ಅವಧಿ ಜೆಡಿಎಸ್‌ಗೆ ಹಾಗೂ ಸ್ಥಾಯಿ ಸಮಿತಿ ಪೂರ್ತಿ ಅವಧಿ ಬಿಜೆಪಿಗೆ ಎಂಬ ಮಾತುಕತೆ ನಡೆದಿದೆ ಎಂದು ತಿಳಿದು ಬಂದಿದೆ.

ನಿರೀಕ್ಷೆಯಂತೆ ನಡೆದರೆ 22 ನೇ ವಾರ್ಡಿನ ಜೆಡಿಎಸ್‌ ಸದಸ್ಯೆ ಶ್ರೀಮತಿ ನಾಹಿದಾ ಅಂಜುಂ ಸೈಯದ್‌ ಇಸ್ರಾರ್‌ ಅಧ್ಯಕ್ಷರಾಗಿ ಮತ್ತು 8ನೇ ವಾರ್ಡಿನ ಜೆಡಿಎಸ್‌ ಸದಸ್ಯೆ ಶ್ರೀಮತಿ ಅಂಜಿನಮ್ಮ ವಿಜಯಕುಮಾರ್‌ ಉಪಾಧ್ಯಕ್ಷರಾಗಿ ಆಯ್ಕೆಯಾಗುವುದು ಪಕ್ಕಾ ಆಗಲಿದೆ.

ಇತ್ತ ಕಾಂಗ್ರೆಸ್‌ ಸದಸ್ಯರೂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳಿಗೆ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಪಕ್ಷಗಳ ಬಲಾಬಲ : ಒಟ್ಟು 23 ಸದಸ್ಯರ ಮಲೇಬೆನ್ನೂರು ಪುರಸಭೆಯಲ್ಲಿ ಕಾಂಗ್ರೆಸ್‌-9, ಬಿಜೆಪಿ-7, ಜೆಡಿಎಸ್‌-5 ಮತ್ತು ಇಬ್ಬರು ಪಕ್ಷೇತರರು ಇದ್ದಾರೆ. ಬಿಜೆಪಿ-ಜೆಡಿಎಸ್‌ ಮೈತ್ರಿ ಜೊತೆ ಪಕ್ಷೇತರ ಸದಸ್ಯರು ಹೋಗುವ ಸಾಧ್ಯತೆ ಹೆಚ್ಚಿದೆ.

ಯಶಸ್ವಿ : ಕಾದು ನೋಡುವ ತಂತ್ರದ ಮೂಲಕ ಅಧಿಕಾರ ಉಳಿಸಿಕೊಳ್ಳುವಲ್ಲಿ ವಾಗೀಶ್‌ಸ್ವಾಮಿ ಯಶಸ್ವಿಯಾದರು.

ಈ ಹಿಂದಿನ ತೀರ್ಮಾನದಂತೆ ಯಾವುದೇ ಮಾತುಕತೆ ಅಥವಾ ಬೇಡಿಕೆ ಇಲ್ಲದಂತೆ ಜೆಡಿಎಸ್‌ನವರು ಬಿಜೆಪಿಗೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡಬೇಕಿತ್ತು. ಆದರೆ, ಅವರು ಹಾಗೆ ಮಾಡದಿದ್ದಾಗ ಮತ್ತು ಕಾಂಗ್ರೆಸ್‌ ಪಕ್ಷದವರ ಜೊತೆ ಜೆಡಿಎಸ್‌ ಮಾತುಕತೆ ನಡೆಸುತ್ತಿದೆ ಎಂಬ ವಿಷಯ ತಿಳಿದಿದ್ದರೂ ತಾಳ್ಮೆಯಿಂದಲೇ ಕಾದು ನೋಡುವ ತಂತ್ರ ಅನುಸರಿಸಿ, ಕೊನೆಗೂ ಜೆಡಿಎಸ್‌ನವರು ತಮ್ಮ ಬಳಿಯೇ ಬರುವಂತೆ ಮಾಡಿಕೊಂಡು ಅಧ್ಯಕ್ಷ ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟಕೊಟ್ಟರೂ ಪುರಸಭೆಯಲ್ಲಿ ಅಧಿಕಾರದ ಜುಟ್ಟು ಹಿಡಿದುಕೊಳ್ಳುವಲ್ಲಿ ಮತ್ತು ಕಾಂಗ್ರೆಸ್‌ನವರನ್ನು ಅಧಿಕಾರದಿಂದ ದೂರವಿಡುವಲ್ಲಿ ವಾಗೀಶ್‌ಸ್ವಾಮಿ ಅವರು ಯಶಸ್ಸು ಸಾಧಿಸಿದ್ದಾರೆ.


ಜಿಗಳಿ ಪ್ರಕಾಶ್‌,
[email protected]

error: Content is protected !!