ಜಿಲ್ಲೆಗೆ ಯೂರಿಯಾ ಪೂರೈಕೆಗೆ ಸಂಸದ ಸಿದ್ದೇಶ್ವರ ಮನವಿಗೆ ಸಚಿವರ ಭರವಸೆ

ದಾವಣಗೆರೆ ಜು. 31 – ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಹೆಚ್ಚಿನ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ಯೂರಿಯಾ ಬೇಡಿಕೆ ಹೆಚ್ಚಾಗಿದೆ. ಮೆಕ್ಕೆಜೋಳಕ್ಕೆ ಉಪಯೋಗಿಸಲು ಬೇಡಿಕೆ ಹೆಚ್ಚಾಗಿದೆ  ಮತ್ತು ಅದೇ ರೀತಿ ರೈತರು ಭತ್ತ ನಾಟಿ ಮಾಡಲು ಸಿದ್ಧತೆ ಆರಂಭಿಸಿರುವುದರಿಂದ ಯೂರಿಯಾ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ.  ಜುಲೈ ತಿಂಗಳಲ್ಲಿ ಜಿಲ್ಲೆಗೆ 13000 ಮೆಟ್ರಿಕ್ ಟನ್ ಯೂರಿಯಾ ಪೂರೈಕೆಯಾಗಬೇಕಿತ್ತು, ಆದರೆ, 9600 ಮೆಟ್ರಿಕ್ ಟನ್ ಮಾತ್ರ ಪೂರೈಕೆಯಾಗಿದೆ. ಹರಪನಹಳ್ಳಿ ತಾಲ್ಲೂಕಿನ ರೈತರು ಬಳ್ಳಾರಿ ಜಿಲ್ಲೆಯ ಬದಲಾಗಿ ದಾವಣಗೆರೆಯನ್ನೇ ಅವಲಂಭಿಸಿರುವುದರಿಂದ ಅವರಿಗೂ ಕೂಡ ತೊಂದರೆಯಾಗದಂತೆ ದಾವಣಗೆರೆಯಿಂದಲೇ ಯೂರಿಯಾ ಪೂರೈಕೆ ಮಾಡಲಾಗುತ್ತಿದೆ. ಈ ಕಾರಣದಿಂದ ರಾಸಾಯನಿಕ ಗೊಬ್ಬರ ಖಾತೆ ಸಚಿವ  ಸದಾನಂದಗೌಡ ಅವರಿಗೆ ಸಂಸದರು ದಾವಣಗೆರೆ ಜಿಲ್ಲೆಯ ಜುಲೈ ತಿಂಗಳ ಕೋಟಾ 3400 ಮೆಟ್ರಿಕ್ ಟನ್ ಹಾಗೂ ಆಗಸ್ಟ್ ತಿಂಗಳ ಕೋಟಾ 11500 ಮೆಟ್ರಿಕ್ ಟನ್ ಯೂರಿಯಾವನ್ನು  ಪೂರೈಕೆ ಮಾಡುವಂತೆ ದೂರವಾಣಿ ಮೂಲಕ ಮನವಿ ಮಾಡಿಕೊಂಡಿದ್ದಾರೆ. 

ಸಂಸದರ ಮನವಿ ಮೇರೆಗೆ ಯಾವುದೇ ಕಾರಣಕ್ಕೂ ತೊಂದರೆಯಾಗದಂತೆ ಪೂರೈಕೆ ಮಾಡುವ ಭರವಸೆಯನ್ನು ಸಚಿವರು ನೀಡಿದ್ದಾರೆ.

error: Content is protected !!