ಲಾರಿ ಮಾಲೀಕರು ಕಳ್ಳರು ಎಂಬ ಹೇಳಿಕೆ ಹಿಂಪಡೆದು, ಕ್ಷಮೆ ಕೇಳಲಿ

ಜಿಲ್ಲಾ ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಒತ್ತಾಯ

ದಾವಣಗೆರೆ, ನ. 4- ಲಾರಿ ಮಾಲೀಕರು ಟ್ರಾನ್ಸ್‌ಪೋರ್ಟ್ ಏಜೆಂಟರು ಕಳ್ಳರು ಎಂದು ಹೇಳಿರುವ ಎಪಿಎಂಸಿ ಹಿರಿಯ ವರ್ತಕ ಜಾವಿದ್ ಸಾಬ್ ತಮ್ಮ ಹೇಳಿಕೆ ಹಿಂಪಡೆದು, ಲಾರಿ ಮಾಲೀಕರ ಕ್ಷಮೆ ಕೇಳಬೇಕು ಎಂದು ಜಿಲ್ಲಾ ಲಾರಿ ಮಾಲೀಕರ ಹಾಗೂ ಟ್ರಾನ್ಸ್‌ಪೋರ್ಟ್ ಏಜೆಂಟರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಒತ್ತಾಯಿಸಿದ್ದಾರೆ.

ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಎಪಿಎಂಸಿಯಲ್ಲಿ ನಿನ್ನೆ ನಡೆದ ಸಭೆಯಲ್ಲಿ ಈ ರೀತಿ ಹೇಳಿಕೆ ನೀಡಿದ್ದು, ಯಾವ ಆಧಾರದ ಮೇಲೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂಬುದನ್ನು ತಿಳಿಸಲಿ ಎಂದರು.

ಜಾವಿದ್ ಸಾಬ್ ಹೇಳಿಕೆ ಖಂಡಿಸಿ ದಾವಣಗೆರೆ, ಚಿತ್ರದುರ್ಗ, ಹಾವೇರಿ,  ಶಿವಮೊಗ್ಗ ಜಿಲ್ಲೆಗಳ ಲಾರಿ ಮಾಲೀಕರು, ಕ್ಷಮೆ ಕೇಳುವವರೆಗೆ ಲೋಡಿಂಗ್‌ಗೆ ಲಾರಿ ಕಳುಹಿಸದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.

ಸಭೆಯಲ್ಲಿ ನಾವು ಅಧಿಕ ಭಾರ ಕಡಿಮೆ ಮಾಡಿ ಎಂದು ಹೇಳಿಲ್ಲ. ಸೂಕ್ತ ಬಾಡಿಗೆ ಕೊಡಿ ಎಂದು ಕೇಳಿದ್ದೆವು. ಆದರೆ, ಹೊರ ಜಿಲ್ಲೆಗಳ ಲಾರಿ ತಂದು ಕೆಲವರು ಗೊಂದಲ ಸೃಷ್ಟಿಸಿದ್ದಾರೆ ಎಂದು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಭೀಮಣ್ಣ, ಜಿ.ನೇತಾಜಿರಾವ್, ಎಂ.ದಾದಾಪೀರ್, ಎಸ್.ಕೆ. ಮಲ್ಲಿಕಾರ್ಜುನ್, ಮಹಾಂತೇಶ ಒಣರೊಟ್ಟಿ ಮತ್ತು ಇತರರು ಉಪಸ್ಥಿತರಿದ್ದರು.

error: Content is protected !!