ದಾವಣಗೆರೆ, ಜು.31- ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತ ವೈಫಲ್ಯ ಮರೆಮಾಚಲು ನೆಹರು ಗಾಂಧೀ ಕುಟುಂಬದ ಮೂರು ಟ್ರಸ್ಟ್‌ಗಳ ವಿರುದ್ಧ ಮೋದಿ, ಅಮಿತ್ ಷಾ ತನಿಖೆಗೆ ಆದೇಶಿಸಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ. ಬಸವರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರ ಕೊರೊನಾ ವೈರಸ್ ನಿಯಂತ್ರಣ ಮಾಡುವಲ್ಲಿಯೂ ಸಹ ವಿಫಲವಾಗಿದೆ. ಕೊರೊನಾ ಹರಡುವಿಕೆಯಲ್ಲಿ ಭಾರತ ವಿಶ್ವದಲ್ಲೇ 3ನೇ ಸ್ಥಾನದಲ್ಲಿದೆ. ದೇಶದಲ್ಲಿ ಮೋದಿ ಇಮೇಜ್ ನೆಲಕಚ್ಚಿದೆ. ತಮಗಾಗಿರುವ ಡ್ಯಾಮೇಜ್ ಕಂಟ್ರೋಲ್‌ಗಾಗಿ ನೆಹರು ಗಾಂಧಿ ಕುಟುಂಬದ ಮೂರು ಟ್ರಸ್ಟ್‌ಗಳ ವಿರುದ್ಧ ಮೋದಿ, ಅಮಿತ್‌ಷಾ ತನಿಖೆಗೆ ಆದೇಶಿಸಿದ್ದಾರೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಡಿ.ಬಸವರಾಜ್ ದೂರಿದ್ದಾರೆ.
ರಾಜೀವ್‌ಗಾಂಧಿ ಪ್ರತಿಷ್ಠಾನ, ರಾಜೀವ್‌ಗಾಂಧಿ ಚಾರಿಟಬಲ್ ಟ್ರಸ್ಟ್ ಮತ್ತು ಇಂದಿರಾಗಾಂಧಿ ಸ್ಮಾರಕ ಟ್ರಸ್ಟ್‌ಗಳು ಆಯಾಯ ಆರ್ಥಿಕ ವರ್ಷದಲ್ಲಿಯೇ ಲೆಕ್ಕ ಪರಿಶೋಧನೆಗೆ ಒಳಪಟ್ಟಿವೆ. ಯಾವುದೇ ಅಕ್ರಮ ಅಥವಾ ಕಾನೂನು ಬಾಹಿರ ಕಾರ್ಯಗಳು ನಡೆದಿರುವುದಿಲ್ಲ. ಆದರೂ ಸಹ ದೇಶದಲ್ಲಿ ಮೋದಿ ಸಂಕಷ್ಟಕ್ಕೆ ಸಿಲುಕಿದಾಗಲೆಲ್ಲಾ ಗಾಂಧಿ ಕುಟುಂಬದ ಮೇಲೆ ಯಾವುದಾದರೊಂದು ಆರೋಪ ಮಾಡಿ ತನಿಖೆಗೆ ಆದೇಶಿಸುವ ಮೂಲಕ ತಮ್ಮ ಮುಖ ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಹೊಸದೇನಲ್ಲ ಎಂದು ಟೀಕಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪಿಎಂ ಕೇರ್ ಫಂಡ್‌ಗಾಗಿ ದೇಶ ವಿದೇಶಗಳ ಜನರಿಂದ ದೇಣಿಗೆ ಪಡೆದಿದ್ದಾರೆ. ಮೊದಲು ಅವರು ದೇಶದ ಜನತೆಗೆ ಅದರ ಲೆಕ್ಕ ಕೊಡಲಿ. ನಂತರ ಇನ್ನೊಬ್ಬರ ಬಗ್ಗೆ ತನಿಖೆ ನಡೆಸಲಿ ಎಂದು ಡಿ. ಬಸವರಾಜ್ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರವು ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಎರಡು ಸಾವಿರ ಕೋಟಿಗೂ ಅಧಿಕ ಹಣದ ಭ್ರಷ್ಟಾಚಾರ ನಡೆಸಿದ್ದು, ಈ ಬಗ್ಗೆ ತನಿಖೆಗೆ ಆದೇಶಿಸಲಿ ಎಂದು ಮೋದಿಯವರಲ್ಲಿ ಅವರು ಆಗ್ರಹಿಸಿದ್ದಾರೆ. ಕರ್ನಾಟಕ ಖರೀದಿ ಹಗರಣದ ಬಗ್ಗೆ ಐಟಿ, ಇಡಿ ಜಾಣ ಕುರುಡು ಪ್ರದರ್ಶಿಸುತ್ತಿವೆ ಎಂದು ಬಸವರಾಜ್ ಟೀಕಿಸಿದ್ದಾರೆ.