ದಾವಣಗೆರೆ, ಜು.31- ಕಳೆದ 12 ದಿನಗಳಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಅನಿರ್ದಿಷ್ಟ ಕಾಲದ ಮುಷ್ಕರವನ್ನು ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್) ರಾಜ್ಯ ಸಮಿತಿ ಸಂಪೂರ್ಣವಾಗಿ ಬೆಂಬಲಿಸುವುದಾಗಿ ಜಿಲ್ಲಾ ಕಾರ್ಯದರ್ಶಿ ಕೆ. ಭಾರತಿ ತಿಳಿಸಿದ್ದಾರೆ.
ಜೀವನ ನಿರ್ವಹಣೆಗಾಗಿ 12,000 ರೂ. ಮಾಸಿಕ ಗೌರವಧನ ಮತ್ತು ಕೊರೊನಾ ಸಂಬಂಧಿತ ಕೆಲಸ ನಿರ್ವಹಿಸಲು ಸಮರ್ಪಕ ಆರೋಗ್ಯ ಕವಚ ಪರಿಕರಗಳನ್ನು ನೀಡಬೇಕೆಂಬ ಅವರ ಬೇಡಿಕೆಗಳು ನ್ಯಾಯಯುತವಾಗಿದೆ. ಪ್ರಸಕ್ತ ಸಂಕಷ್ಟದ ಪರಿಸ್ಥಿತಿಯಲ್ಲಿ ಕೊರೊನಾ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಯೋಧರಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತೆಯರ ಯೋಗ ಕ್ಷೇಮವನ್ನು ಸರ್ಕಾರ ಕೈಬಿಟ್ಟಿದೆ.
ಆಶಾ ಕಾರ್ಯಕರ್ತೆಯರ ದೃಢ ಹೋರಾಟದ ಜೊತೆಗೆ ನಾವಿದ್ದೇವೆ ಎಂದು ತಿಳಿಸುವ ಮನವಿ ಪತ್ರವನ್ನು ನಗರದ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯರಾದ ಮಮತ, ನಾಗಸ್ಮಿತ, ಧನುಷಾ ಇನ್ನಿತರರಿದ್ದರು.