ಹರಪನಹಳ್ಳಿ, ಜು.31- ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಡೆಸಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದ್ದು, ಎಂ.ಪಿ. ಸಮಾಜಮುಖಿ ಟ್ರಸ್ಟ್ನ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್ ಬೆಂಬಲ ನೀಡಿದ್ದಾರೆ.
ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಸೇರಿದ್ದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಸ್ಥಳಕ್ಕೆ ತಹಶೀಲ್ದಾರ್ ಅನಿಲ್ ಆಗಮಿಸಿ ಅಹವಾಲು ಸ್ವೀಕರಿಸಿ ಸರ್ಕಾರಕ್ಕೆ ಮನವಿ ತಲುಪಿಸುವುದಾಗಿ ಭರವಸೆ ನೀಡಿದರು. ಆಶಾ ಕಾರ್ಯಕರ್ತೆಯರ ಪ್ರತಿನಿಧಿ ಶಾರದಮ್ಮ ಮಾತನಾಡಿ ಕೂಡಲೇ 12 ಸಾವಿರ ಗೌರವ ಧನ ನಿಗದಿ ಮಾಡಿ ಘೋಷಿಸಬೇಕು. ಸುರಕ್ಷತಾ ಸಾಮಗ್ರಿಗಳನ್ನು ನೀಡಬೇಕು ಇತ್ಯಾದಿ ಬೇಡಿಕೆಗಳನ್ನು ತಿಳಿಸಿದರು.
ಬೇಡಿಕೆ ಈಡೇರದಿದ್ದರೆ ಜುಲೈ 29 ರಂದು ರಾಜ್ಯವ್ಯಾಪಿ ಜಿಲ್ಲಾ ಮಟ್ಟದಲ್ಲಿ ಹೋರಾಟಕ್ಕೆ ಸಂಘಟನೆ ನಿರ್ಧರಿಸಿದೆ ಎಂದರು. ಎಂ.ಪಿ. ಪ್ರಕಾಶ್ ಸಮಾಜ ಮುಖಿ ಟ್ರಸ್ಟ್ನ ಮುಖಂಡರಾದ ಗುರುಪ್ರಸಾದ್ ಮಾತನಾಡಿದರು. ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಸದಸ್ಯರು, ಎಂ.ಪಿ. ವೀಣಾ ಮಹಾಂತೇಶ್ ಅಭಿಮಾನಿ ಬಳಗದ ದಾದಾಪೀರ್, ಸಿದ್ದನಗೌಡ, ಸಚಿನ್, ಮನೋಜ, ಆಶಾ ಕಾರ್ಯಕರ್ತೆಯರಾದ ಗೀತಾ, ಇ. ದುರುಗಮ್ಮ, ಎನ್. ಗಾಯತ್ರಿ, ಲಲಿತಮ್ಮ, ಟಿ. ರೇಣುಕಾ, ಎಚ್. ಮಂಜುಳಾ, ಸಂಪಿಬಾಯಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.