ಕಡಿಮೆ ಬೆಲೆಗೆ ಧಾನ್ಯ ಖರೀದಿ : ಕ್ರಮಕ್ಕೆ ಆಗ್ರಹಿಸಿ ಹೊನ್ನಾಳಿ ರೈತರ ಪ್ರತಿಭಟನೆ

ದಾವಣಗೆರೆ, ನ.3- ರೈತರು ಬೆಳೆದ ಬೆಳೆಗಳಿಗೆ ಸರ್ಕಾರ ಘೋಷಿಸಿರುವ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ಖರೀದಿಸುವ ದಲ್ಲಾಳಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಅಖಿಲ ಕರ್ನಾಟಕ ರೈತ ಸಂಘದ ಹೊನ್ನಾಳಿ ತಾಲ್ಲೂಕು ಘಟಕದ ಪದಾಧಿಕಾರಿಗಳು ನಿನ್ನೆ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಜಮಾಯಿಸಿದ್ದ ಪ್ರತಿಭಟನಾಕಾರರು, ಆದಷ್ಟು ಬೇಗ ಸರ್ಕಾರ ಖರೀದಿ ಕೇಂದ್ರಗಳನ್ನು ತೆರೆಯುವ ಮೂಲಕ ವರ್ತಕರ ಹಾವಳಿಗೆ ಕಡಿವಾಣ ಹಾಕಬೇಕು. ಇಲ್ಲವಾದಲ್ಲಿ ದಲ್ಲಾಳಿಗಳು ಕಡಿಮೆ ಬೆಲೆಗೆ ರೈತರ ಬೆಳೆಗಳನ್ನು ಖರೀದಿಸುವ ಸಂಭವವಿದೆ ಎಂದು  ಸರ್ಕಾರಕ್ಕೆ ಜಿಲ್ಲಾಡಳಿತದ ಮುಖಾಂತರ ಮನವಿ ಸಲ್ಲಿಸಿದರು.

ಕೇಂದ್ರ ಸರ್ಕಾರವು 2020-21ನೇ ಸಾಲಿನ ರೈತರು ಬೆಳೆದ ಒಟ್ಟು 25 ಬೆಳೆಗಳಿಗೆ ಬೆಂಬಲ ಬೆಲೆಯನ್ನು ಘೋಷಿಸಿರುತ್ತದೆ. ಇದರಂತೆ ಸರ್ಕಾರವು ಎಲ್ಲಾ ಮಾರುಕಟ್ಟೆಯಲ್ಲಿ ರೈತರು ಬೆಳೆದಿರುವ ಭತ್ತ, ಮೆಕ್ಕೆಜೋಳ, ಈರುಳ್ಳಿ, ರಾಗಿ, ತೊಗರಿ ಇತರೆ ಬೆಳೆಗಳನ್ನು ಖರೀದಿಸಲು ತಕ್ಷಣ ಮಾರುಕಟ್ಟೆಯಲ್ಲಿ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದು ಅವಶ್ಯವಿದೆ. ಇದು ವಿಳಂಬವಾದಲ್ಲಿ ಹೊರಗಿನ ದಲ್ಲಾಳಿಗಳು ರೈತರಿಂದ ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿಸುವ ಸಂಭವ ಇರುವುದರಿಂದ ಕೂಡಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲು ಒತ್ತಾಯಿಸಿದರು.

ಕೇಂದ್ರ ಸರ್ಕಾರವು ಘೋಷಣೆ ಮಾಡಿರುವ ಬೆಂಬಲ ಬೆಲೆಗಿಂತ ಹೆಚ್ಚಿನ ಬೆಲೆಗೆ ದಲ್ಲಾಳಿಗಳು ಖರೀದಿಸದೇ ಕಡಿಮೆ ಬೆಲೆಗೆ ಬೆಳೆಗಳನ್ನು ರೈತರಿಂದ ಖರೀದಿಸಿದರೆ, ಇಂತಹ ವರ್ತಕರ ಮೇಲೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಖರೀದಿ ಕೇಂದ್ರವನ್ನು ತಕ್ಷಣ ತೆರೆಯದೇ ದಲ್ಲಾಳಿಗಳಿಗೆ ಲಾಭ ತಂದುಕೊಡಲು ಪ್ರಯತ್ನಿಸಿದರೆ ಸರ್ಕಾರದ ವಿರುದ್ದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಭಟನೆಯಲ್ಲಿ ಅಧ್ಯಕ್ಷ ಕೆ.ಸಿ. ಬಸಪ್ಪ, ಡಿ.ಎಂ. ಕರಿಬಸಪ್ಪ, ಕೋಟಿ ಈರಪ್ಪ, ಹೆಚ್. ನಾಗರಾಜಪ್ಪ, ಹೆಚ್. ಆನಂದಪ್ಪ, ನೀಲಕಂಠಪ್ಪ, ಹೆಚ್.ಬಿ. ಬಸವರಾಜ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!