ಸಮುದಾಯಕ್ಕೆ ಅವಮಾನ : ಕಟೀಲ್ ರಾಜೀನಾಮೆಗೆ ತಾಂಡಾ ವೇದಿಕೆ ಆಗ್ರಹ

ದಾವಣಗೆರೆ, ನ.2- ಸಮುದಾಯಗಳನ್ನು ಅವಮಾನಿಸುವ ಹೇಳಿಕೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ತಕ್ಷಣವೇ ರಾಜೀನಾಮೆ ನೀಡಬೇಕು. ಬಹಿರಂಗ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ   ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ‌ವತಿಯಿಂದ ನಗರದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.

ಜಯದೇವ ವೃತ್ತದಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು, ಕಟೀಲ್ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ಉಪವಿಭಾಗಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಬಹಿರಂಗ ಪ್ರಚಾರ ಸಭೆಯಲ್ಲಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸರ್ಕಾರ ಬದ್ಧವಾಗಿದೆ ಎಂದು ಸುಳ್ಳು ಹೇಳಿಕೆ ನೀಡುವ ಮೂಲಕ ಲಂಬಾಣಿ, ಭೋವಿ, ಕೊರಚ, ಕೊರಮ ಮತ್ತು ಇನ್ನಿತರೆ ಜನಾಂಗಕ್ಕೆ ಅವಮಾನ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸಮಾನತೆಯ ಮಾತನಾಡಿ, ನಾವೆಲ್ಲರೂ ಒಂದೇ ಎನ್ನುವ ಆಶಾಭಾವನೆ ಮೂಡಿಸುವುದನ್ನು ಬಿಟ್ಟು, ತಮ್ಮ ರಾಜಕೀಯ ಲಾಭಕ್ಕಾಗಿ ಸಮುದಾಯಗಳನ್ನು ತುಳಿಯುವುದು ಎಷ್ಟರ ಮಟ್ಟಿಗೆ ಸರಿ ಎನ್ನುವುದನ್ನು ಅವರು ತಿಳಿಯಬೇಕು. ಆಯೋಗದ ವರದಿ ಅನುಷ್ಠಾನ ಮಾಡಲು ಇವರೇನು ರಾಜ್ಯದ ಮುಖ್ಯಮಂತ್ರಿಗಳೇ ಅಥವಾ ಸಮಾಜ ಕಲ್ಯಾಣ ಸಚಿವರೇ? ಎಂದು ಪ್ರಶ್ನಿಸಿದರಲ್ಲದೇ, ಮೀಸಲಾತಿ ವಿರುದ್ಧ ಹಾಗೂ ಸಂವಿಧಾನ ಬದಲಾಯಿಸುತ್ತೇವೆಂದು ಹೇಳುವವರು ಈಗ ಈ ರೀತಿ ಹೇಳಿಕೆ ನೀಡುವುದು ಸಹೋದರ ಜಾತಿಗಳ ನಡುವೆ ಒಡಕು ಮೂಡಿಸುವ ಕುತಂತ್ರವಾಗಿದೆ ಎಂದು ಆಕ್ಷೇಪಿಸಿದರು.

ಪ್ರತಿಭಟನೆಯಲ್ಲಿ ಸಂಸ್ಥಾಪಕ ರಾಜ್ಯಾಧ್ಯಕ್ಷ ಲಿಂಗರಾಜ್‍ನಾಯ್ಕ್, ಜಿಲ್ಲಾಧ್ಯಕ್ಷ ಶಶಿಕುಮಾರ್ ಪುಟಗನಾಳ್, ಜಿಲ್ಲಾ ಪಂಚಾಯತ್ ಕಾರ್ಯದರ್ಶಿ ಶಶಿಕುಮಾರ್, ಕುಮಾರನಾಯ್ಕ್ ಸೇರಿದಂತೆ ಇತರರು ಭಾಗವಹಿಸಿದ್ದರು.

error: Content is protected !!