ರಾಣೇಬೆನ್ನೂರು, ಅ.29 – ದಿನಾಂಕ 1ರಂದು ನಡೆಯಲಿರುವ ಇಲ್ಲಿನ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆಯಲ್ಲಿ ನಮ್ಮ ಬಳಿ ಬಂದವರಿಗೆ ಕಾಂಗ್ರೆಸ್ ಪಕ್ಷ ಬೆಂಬಲಿಸಲಿದೆ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ ಕೆ.ಬಿ.ಕೋಳಿವಾಡ ಹೇಳಿದರು.
ನಿನ್ನೆ ಇಲ್ಲಿ ನಡೆದ ಪಶ್ಚಿಮ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಿದ ನಂತರ ತಮ್ಮ ನಿವಾಸದಲ್ಲಿ ಪತ್ರಕರ್ತರ ಜೊತೆ ಮಾತನಾಡುತ್ತಿದ್ದರು.
ನಗರಸಭೆಯಲ್ಲಿ ಬಿಜೆಪಿ 16, ಕೆಪಿಜೆಪಿ 10 ಸದಸ್ಯರನ್ನು ಹೊಂದಿದ್ದು, ಕೆಪಿಜೆಪಿಯಲ್ಲಿನ ಕೆಲವರು ಬಿಜೆಪಿ ಸೇರಿದ್ದಾರೆ. 9 ಸದಸ್ಯರು ನಮ್ಮವರಿದ್ದಾರೆ. ನಮಗೆ ಬಹುಮತವಿಲ್ಲ. ಹಾಗಾಗಿ ನಮ್ಮ ಪ್ರಯತ್ನವಿಲ್ಲ. ಅವರಲ್ಲಿ ಒಡಕುಂಟಾಗಿ ನಮ್ಮ ಬಳಿ ಬಂದವರನ್ನು ಬೆಂಬಲಿಸುತ್ತೇವೆ. ಕಾಯುವ ತಂತ್ರದಲ್ಲಿದ್ದೇವೆ ಎಂದು ಕೋಳಿವಾಡ ಹೇಳಿದರು.
ರೈತರ, ಕಾರ್ಮಿಕರ ಮರಣ ಶಾಸನ ಬರೆಯವ ಸರ್ಕಾರ ಇದಾಗಿದೆ. ಕಾಂಗ್ರೆಸ್ಸಿನ ದಿವಂಗತ ದೇವರಾಜ ಅರಸು ಅವರು ಉಳುವವನನ್ನೇ ಒಡೆಯನನ್ನಾಗಿ ಮಾಡಿದ್ದರು. ಆದರೆ ಬಿಜೆಪಿ ಸರ್ಕಾರ ಉಳ್ಳವರನ್ನು ಒಡೆಯರನ್ನು ಮಾಡುತ್ತಿದೆ ಎಂದು ಕೋಳಿವಾಡ ತಿದ್ದುಪಡಿ ಸುಗ್ರೀ ವಾಜ್ಞೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕೋವಿಡ್, ಮಹಾಪೂರ ನಿರ್ವಹಣೆ ಎಲ್ಲದರಲ್ಲೂ ಸರ್ಕಾರ ಎಡವುತ್ತಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬಗ್ಗೆ ಜನರಿಗೆ ಬೇಸರ ಉಂಟಾಗಿದೆ. ಕಾರಣ ಕಳೆದ ಒಂದು ವರ್ಷದಿಂದಲೂ ಈ ಕ್ಷೇತ್ರದ ಮತದಾರರ ಒಲವು ಪಡೆಯುವ ಪ್ರಯತ್ನ ನಡೆಸಿದ್ದ ಪಶ್ಚಿಮ ಪದವೀಧರರ ಕ್ಷೇತ್ರದ ನಮ್ಮ ಅಭ್ಯರ್ಥಿ ಕುಬೇರಪ್ಪ ಹಾಗೂ ವಿಧಾನಸಭೆ ಎರಡು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಖಚಿತವಾಗಿ ಜಯ ಗಳಿಸಲಿದೆ ಎಂದು ಕೋಳಿವಾಡ ಹೇಳಿದರು.
ಚುನಾವಣೆಗಳು ನಡೆದು ಬಹುಮತ ಗಳಿಸಿದ ನಂತರ ಶಾಸಕರ ಅಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ವರಿಷ್ಠರು ಆಯ್ಕೆ ಮಾಡುತ್ತಾರೆ. ಈ ಸಂಪ್ರದಾಯ ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ನಡೆದು ಬಂದಿದೆ. ಇದು ಎಂದೆಂದಿಗೂ ಜಾರಿಯಲ್ಲಿರುತ್ತೆ. ಇದನ್ನು ಹೊರತು ಪಡಿಸಿ ಪಕ್ಷದ ಮುಖಂಡರಿಂದ ಬರುತ್ತಿರುವ ಹೇಳಿಕೆಗಳ ಬಗ್ಗೆ ಪಕ್ಷದ ಸಂವಿಧಾನದನ್ವಯ ಕ್ರಮ ಜರುಗಿಸಲಾಗುತ್ತದೆ ಶಿಸ್ತು ಸಮೀತಿಯ ಸದಸ್ಯರೂ ಆಗಿರುವ ಕೋಳಿವಾಡ ಅವರು ಪಕ್ಷದ ವಿದ್ಯಮಾನಗಳ ಬಗ್ಗೆ ಪ್ರಸ್ತಾಪಿಸಿದರು.