ದಾವಣಗೆರೆ, ಜು. 25- ಮಹಾನಗರ ಪಾಲಿಕೆ, ಸ್ಮಾರ್ಟ್ ಸಿಟಿ, ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿಯಲ್ಲಿ ಬರುವ ಕೇಂದ್ರ, ರಾಜ್ಯ ಸರ್ಕಾರಗಳ ಯೋಜನೆಗಳ ಅನುದಾನ ದುರ್ಬಳಕೆಯಾದಲ್ಲಿ ಅಥವಾ ಅರ್ಹ ಫಲಾನುಭವಿಗಳಿಗೆ ದೊರಕದೇ ಇದ್ದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರ ಗಮನಕ್ಕೆ ತರುವಂತೆ ದಿಶಾ ಸಮಿತಿ ಸದಸ್ಯ ಹೆಚ್.ಕೆ. ಬಸವರಾಜ್ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಬಂಧಪಟ್ಟ ಫಲಾನುಭವಿಗಳು, ಸಾರ್ವಜನಿಕರು ಸರ್ಕಾರಿ ಯೋಜನೆಗಳ ಬಗ್ಗೆ ಗೊಂದಲ, ಲೋಪ ಅಥವಾ ಇನ್ನಾವುದೇ ದೂರುಗಳಿದ್ದರೆ ಲಿಖಿತ ರೂಪದಲ್ಲಿ ದಿಶಾ ಸಮಿತಿ ಸದಸ್ಯರ ಕಚೇರಿ, ಶಾಮನೂರು ರಸ್ತೆ, ದಾವಣಗೆರೆ ಇಲ್ಲಿಗೆ ಅಥವಾ ದೂರವಾಣಿ ಮೂಲಕ 94494-00920, 08192-262904ಕ್ಕೆ ನೀಡಿದಲ್ಲಿ, ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯ ಗಮನಕ್ಕೆ ತಂದು ಸರಿಪಡಿಸಲಾಗುವುದು ಎಂದು ಹೇಳಿದರು.
ಅಧಿಕಾರಿ ಹಾಗೂ ರಾಜಕಾರಣಿಗಳ ನಡುವೆ ಸಮನ್ವ ಯತೆ ಸಾಧಿಸುವ ಕೆಲಸವನ್ನು ಸದಸ್ಯರು ಮಾಡಲಿದ್ದಾರೆ. ಪ್ರತಿ ಮೂರು ತಿಂಗಳಿಗೊಮ್ಮೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಸಮಸ್ಯೆ ಗಳನ್ನು ಬಗೆಹರಿಸಲಾಗುವುದು ಎಂದು ವಿವರಿಸಿದರು.
ಭಾರತ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾತ್ ರಾಜ್ಯ ಇಲಾಖೆಯಿಂದ ದಿಶಾಗೆ ತಮ್ಮನ್ನೂ ಸೇರಿದಂತೆ ಜಿ.ಚಂದ್ರೇಗೌಡರು, ಜಿ.ಪಿ. ಮುಪ್ಪಣ್ಣ ಹಾಗೂ ಶ್ರೀಮತಿ ಹೆಚ್.ಎಂ. ಆಶಾ ದೇವರಾಜ್ ಅವರನ್ನು ನೇಮಿಸಿರುವುದಾಗಿ ಬಸವರಾಜ್ ಹೇಳಿದರು. ನೂತನ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.