ಜಿಲ್ಲಾಡಳಿತಕ್ಕೆ ಮಹಾನಗರ ಪಾಲಿಕೆ ವಿಪಕ್ಷ ನಾಯಕ ಎ.ನಾಗರಾಜ್ ಆಗ್ರಹ
ದಾವಣಗೆರೆ, ಜು. 25 – ನಗರದಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸುವಲ್ಲಿ ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದ್ದು, ವ್ಯಕ್ತಿಯೊಬ್ಬರಿಗೂ ಪಾಸಿಟಿವ್ ಬಂದು 2-3 ದಿನಗಳಾದರೂ ಸಹ ಆಸ್ಪತ್ರೆಗಳಲ್ಲಿ ಬೆಡ್ ಇಲ್ಲ ಎಂಬ ನೆಪವೊಡ್ಡಿ ಪಾಸಿಟಿವ್ ಹೊಂದಿದ ವ್ಯಕ್ತಿ ಮನೆ ಹೊರಗಡೆ ಇರುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಎ.ನಾಗರಾಜ್ ದೂರಿದ್ದಾರೆ.
ಕೋವಿಡ್-19 ಸಾಂಕ್ರಾಮಿಕ ರೋಗ ಆಗಿರುವ ಕಾರಣ ಪಾಸಿಟಿವ್ ಪ್ರಕರಣ ಬಂದ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ನೀಡಬೇಕು. ಜಿಲ್ಲಾಧಿಕಾರಿಗಳು ರೋಗ ವನ್ನು ಎದುರಿಸಲು ಸಕಲ-ಸಿದ್ದತೆ ಮಾಡಿಕೊಳ್ಳ ಲಾಗಿದೆ ಎಂಬ ಹೇಳಿಕೆ ನೀಡಿದ್ದಾರೆ. ಆದರೆ ದಾವಣಗೆರೆಯ ವಿನೋಬನಗರದಲ್ಲಿ ವ್ಯಕ್ತಿಯೊ ಬ್ಬರಿಗೆ ಪಾಸಿಟಿವ್ ಬಂದು 2-3 ದಿನಗಳಾದರೂ ಅವರನ್ನು ಯಾಕೆ ಆಸ್ಪತ್ರೆಗೆ ಕರೆದುಕೊಂಡು ಹೋಗಿಲ್ಲ ಎಂದು ನಾಗರಾಜ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಹೋಂ ಕ್ವಾರಂಟೈನ್‍ನಲ್ಲಿರುವಂತೆ ಅಧಿಕಾರಿಗಳು ತಿಳಿಸುತ್ತಾರೆ. ಆದರೆ ವಿನೋಬನಗರದಲ್ಲಿ ಸಣ್ಣ ಮನೆಗಳಿದ್ದು, ಪ್ರತ್ಯೇಕ ಕೋಣೆಗಳಿರುವುದಿಲ್ಲ. ಪಾಸಿಟಿವ್ ಬಂದ ವ್ಯಕ್ತಿಯ ಮನೆಯಲ್ಲಿ ಸಹೋದರಿ ತುಂಬು ಗರ್ಭಿಣಿಯೊಬ್ಬರಿದ್ದು, ಗರ್ಭಿಣಿಗೆ ಪಾಸಿಟಿವ್ ಬರಬಾರದು ಎಂಬ ಕಾರಣಕ್ಕೆ ಪಾಸಿಟಿವ್ ವ್ಯಕ್ತಿ ಮಳೆಯಲ್ಲಿಯೇ ಹೊರಗಡೆ ಇದ್ದು, ರಾತ್ರಿ ಕಳೆದಿದ್ದು, ಇಂತಹ ಸ್ಥಿತಿ ಮತ್ತೊಬ್ಬರಿಗೆ ಬರದಂತೆ ಜಿಲ್ಲಾಡಳಿತ ಎಚ್ಚೆತ್ತು ಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.
ಈ ಕೂಡಲೇ ಪಾಸಿಟಿವ್ ಬಂದ ವ್ಯಕ್ತಿಗಳಿಗೆ ಬೆಡ್ ಒದಗಿಸುವ ಕೆಲಸವನ್ನು ಜಿಲ್ಲಾಧಿಕಾರಿಗಳು ಮಾಡ ಬೇಕೆಂದು ಆಗ್ರಹಿಸಿರುವ ನಾಗರಾಜ್ ಅವರು ದಾವಣಗೆರೆ ನಗರದಲ್ಲಿ ಎಲ್ಲಾ ಸಮಾಜದವರ ಸಮುದಾಯ ಭವನಗಳಿದ್ದು, ಆ ಸಮಾಜದವರು ಆಯಾ ಸಮುದಾಯದ ಪಾಸಿಟಿವ್ ವ್ಯಕ್ತಿಗಳಿಗೆ ಪಾಸಿಟಿವ್ ಬಂದಲ್ಲಿ ಅವರಿಗೆ ಆಯಾ ಸಮುದಾಯ ಭವನಗಳಲ್ಲಿ ಹೋಂ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ಅನುಮತಿ ನೀಡಿ ಸಹಕರಿಸಬೇಕೆಂದು ಆಗ್ರಹಿಸಿದ್ದಾರೆ.
ಪಾಸಿಟಿವ್ ಬಂದ ವ್ಯಕ್ತಿಯ ಮನೆ ಮುಂಭಾಗ ಕಂಟೈನ್‍ಮೆಂಟ್ ಝೋನ್ ಮಾಡಲು ಸಹ ಜಿಲ್ಲಾಡಳಿತ ವಿಫಲವಾಗಿದೆ ಎಂಬುದಕ್ಕೆ ಇತ್ತೀಚಿನ ಜಾಲಿನಗರ ಮತ್ತು ವಿನೋಬನಗರದ ಪ್ರಕರಣಗಳೇ ಸಾಕ್ಷಿ. ಜಾಲಿನಗರದಲ್ಲಿನ ವ್ಯಕ್ತಿಯೊಬ್ಬರಿಗೆ ಪಾಸಿಟಿವ್ ಬಂದು 3-4 ದಿನಗಳು ಚಿಕಿತ್ಸೆ ಪಡೆದು ಮೃತರಾಗಿದ್ದು, ಅವರ 9 ದಿನದ ತಿಥಿ ಕಾರ್ಯ ಮಾಡುವ ಸಮಯದಲ್ಲಿ ಅಧಿಕಾರಿಗಳು ಸೀಲ್‍ಡೌನ್ ಮಾಡಲು ಆಗಮಿಸಿದ್ದರು ಎಂದು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.
ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜನತೆ ಭಯಭೀತರಾಗಿದ್ದು, ಜಿಲ್ಲಾಧಿಕಾರಿಗಳು ಆದಷ್ಟು ಶೀಘ್ರ ಕಂಟೈನ್‍ಮೆಂಟ್ ಝೋನ್ ಮಾಡಲು ಆದೇಶ ನೀಡುವುದರ ಜೊತೆಗೆ ಕಂಟೈನ್‍ಮೆಂಟ್ ಝೋನ್‍ಗಳನ್ನು ಡಿನೋಟಿಫೈ ಮಾಡಲು ಸಹ ಅಗತ್ಯ ಕ್ರಮಕೈಗೊಳ್ಳಬೇಕೆಂದು ನಾಗರಾಜ್ ಅವರು ಆಗ್ರಹಿಸಿದ್ದಾರೆ.