ವಾರ್ಡ್ ವ್ಯಾಪ್ತಿ ಕಂಟೈನ್ಮೆಂಟ್ ಝೋನ್ ವಿಚಾರದಲ್ಲಿ ಪರಾಭವಗೊಂಡ ಅಭ್ಯರ್ಥಿ ಮೇಲೆ ಹಲ್ಲೆ ಆರೋಪ
ದಾವಣಗೆರೆ, ಜು.22- ವಾರ್ಡ್ ವ್ಯಾಪ್ತಿಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಕಂಟೈನ್ಮೆಂಟ್ ಝೋನ್ ಮಾಡುವ ವಿಚಾರವಾಗಿ ಬಿಜೆಪಿಯ ಪಾಲಿಕೆ ಸದಸ್ಯನ ಮೇಲೆ ಪರಾಭವಗೊಂಡ ಸ್ವಪಕ್ಷೀಯ ಎದುರಾಳಿ ಅಭ್ಯರ್ಥಿ ಸೇರಿ ಐವರು ಹಲ್ಲೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಈ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಗರದ ಕಾಯಿಪೇಟೆಯ 18ನೇ ವಾರ್ಡ್ ನ ಬಿಜೆಪಿ ಪಾಲಿಕೆ ಸದಸ್ಯ ಸೋಗಿ ಶಾಂತಕುಮಾರ್ ಹಲ್ಲೆಗೊಳಗಾದವರು. ಅದೇ ಪಕ್ಷದಲ್ಲಿದ್ದು ನಂತರ ಪಾಲಿಕೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಶಾಂತ್ ಕುಮಾರ್ ಗೆ ಎದುರಾಳಿಯಾಗಿ ನಿಂತು ಪರಾಭವಗೊಂಡಿದ್ದ ಮಂಜು ಪುರವಂತರ ಹಾಗೂ ಆತನ ಬೆಂಬಲಿಗರಿಂದ ಹಲ್ಲೆ ನಡೆದಿದೆ ಎಂದು ಆರೋಪಿಸಲಾಗಿದೆ.
ಘಟನೆ ಹಿನ್ನೆಲೆ: ಕಾಯಿಪೇಟೆಯಲ್ಲಿ ಪಾಸಿಟಿವ್ ವರದಿಗಳು ದೃಢಪಟ್ಟಿದ್ದರಿಂದ ಆ ಏರಿಯಾವನ್ನು ಕಂಟೈನ್ಮೆಂಟ್ ಝೋನ್ ಮಾಡಿ ಹೋಂ ಕ್ವಾರಂಟೈನ್ ಮಾಡಿಸಿಲ್ಲ, ಬ್ಯಾರಿಕೇಡ್ ಹಾಕಿಸಿಲ್ಲವೆಂಬುದಾಗಿ ಕಾಯಿಪೇಟೆಯಲ್ಲಿರುವ ಸೋಗಿ ಶಾಂತಕುಮಾರ್ ಅವರ ಮನೆಗೆ ಮೊನ್ನೆ ಸೋಮವಾರ ರಾತ್ರಿ ಬಂದು ಪ್ರಶ್ನಿಸಿದ್ದಾರೆ. ಆಗ ಶಾಂತಕುಮಾರ್ ಅವರು ಈ ಬಗ್ಗೆ ಜಿಲ್ಲಾಧಿಕಾರಿಗಳು ಆದೇಶ ಮಾಡಬೇಕು ನಾವಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ. ಆಗ ಅಸಮಾಧಾನಗೊಂಡ ಮಂಜು ತನ್ನ ಬೆಂಬಲಿಗರೊಂದಿಗೆ ಸೇರಿ ಶಾಂತಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ತಕ್ಷಣವೇ ಬಸವನಗರ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಶಾಂತ ಕುಮಾರ್ ಕರೆ ಮಾಡಿ ತಿಳಿಸಿದ್ದಾರೆ. ಅಲ್ಲದೇ, ವಿಷಯ ತಿಳಿದ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮತ್ತು ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಸ್ಥಳಕ್ಕಾಗಮಿಸಿ ಹಲ್ಲೆ ಮಾಡಿದವರನ್ನು ಚದುರಿಸಿ, ಘಟನಾ ಸ್ಥಳದಿಂದ ಶಾಂತ ಕುಮಾರ್ ಹಾಗೂ ಹಲ್ಲೆ ಮಾಡಿದವರನ್ನು ಬಸವನಗರ ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆ ಸಂಬಂಧ ಶಾಂತಕುಮಾರ್ ದೂರು ನೀಡಿದ್ದಾರೆ.
ಆರೋಪಿಗಳು ಚುನಾವಣೆಯಲ್ಲಿ ಅಪಜಯ ಹೊಂದಿರುವ ಹತಾಷೆಯಿಂದ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿ, ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಿದ್ದಾರೆ.
ಸೋಗಿ ಶಾಂತಕುಮಾರ್ ಅವರ ದೂರಿನ ಅನ್ವಯ ಐವರನ್ನು ಬಂಧಿಸಿ ಬೇಲ್ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಬಸವನಗರ ಠಾಣೆ ಪಿಎಸ್ಐ ನಾಗರಾಜ್ ತಿಳಿಸಿದ್ದಾರೆ.