ದಾವಣಗೆರೆ, ಅ.23- ಪ್ರಧಾನಿ ನರೇಂದ್ರ ಮೋದಿ ಅವರ ಮನ್ ಕೀ ಬಾತ್ನಲ್ಲಿ ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ನಡೆದ ದಲಿತ ಯುವತಿಯ ಮೇಲಿನ ಅತ್ಯಾಚಾರ, ಹತ್ಯೆ ಮತ್ತು ಅಲ್ಲಿ ನಡೆಯುತ್ತಿರುವ ಮಹಿಳಾ ದೌರ್ಜನ್ಯದ ಬಗ್ಗೆ ಮಾತನಾಡಬೇಕೆಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಒತ್ತಾಯಿಸಿದ್ದಾರೆ.
ಅತ್ಯಾಚಾರ ಮತ್ತು ಆಕೆಯ ಹತ್ಯೆಯ ಬಗ್ಗೆ ಇಡೀ ದೇಶಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಈವರೆಗೂ ಈ ಬಗ್ಗೆ ಚಕಾರ ಎತ್ತಿಲ್ಲ ಮತ್ತು ಸಂತ್ರಸ್ತೆಯ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ. ಆದ್ದರಿಂದ ಈ ಬಾರಿಯ ಮನ್ಕೀ ಬಾತ್ನಲ್ಲಿ ಈ ಪ್ರಕರಣದ ಬಗ್ಗೆ ಮಾತನಾಡಬೇಕೆಂದು ಒತ್ತಾಯಿಸಿ ಪ್ರಧಾನಿ ಅವರ ಕಾರ್ಯಾಲಯ ಮತ್ತು ಅವರ ನಿವಾಸದ ಕಚೇರಿಯ ವಿಳಾಸಕ್ಕೆ ರಿಜಿಸ್ಟರ್ ಪೋಸ್ಟ್ನಲ್ಲಿ ಎರಡು ಪುಟಗಳ ಪತ್ರ ಕಳುಹಿಸಲಾಗಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್, ಜಿಲ್ಲಾ ಪಂಚಾಯತ್ ಸದಸ್ಯ ಕೆ.ಎಚ್. ಓಬಳಪ್ಪ, ಮುಖಂಡರಾದ ಶಂಕರ್, ಕೆ.ಎಂ. ಮಂಜುನಾಥ್, ಬಿ.ಎಚ್. ಉದಯಕುಮಾರ್, ಕೊಂಡಜ್ಜಿ ಮಲ್ಲಿಕಾರ್ಜುನ್, ಡಿ. ಶಿವಕುಮಾರ್ ಇದ್ದರು.