ಸಾಹಿತಿ ಟಿ. ಗಿರಿಜಾ ಸಂಸ್ಮರಣೆ
ದಾವಣಗೆರೆ,ಜು.20- ಜಿಲ್ಲೆಯ ಹಿರಿಯ ಸಾಹಿತಿಯಾಗಿದ್ದ ಶ್ರೀಮತಿ ಟಿ. ಗಿರಿಜಾ ಅವರ ಆರನೇ ಸಂಸ್ಮರಣೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಮತ್ತು ವನಿತಾ ಸಮಾಜ ಇವರ ಜಂಟಿ ಆಶ್ರಯದಲ್ಲಿ ಆನ್ ಲೈನ್ ಕವಿಗೋಷ್ಠಿ ನಡೆಸಲಾಯಿತು.
ಮಾಜಿ ಸಚಿವರೂ, ವನಿತಾ ಸಮಾಜದ ಸಂಸ್ಥಾಪಕ ಅಧ್ಯಕ್ಷರೂ, ಜಿಲ್ಲಾ ವನಿತಾ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷರೂ ಆದ ಶ್ರೀಮತಿ ನಾಗಮ್ಮ ಕೇಶವಮೂರ್ತಿ ಅವರು ಆನ್ ಲೈನ್ ಮೂಲಕ ಕವಿಗೋಷ್ಠಿಯನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವಿಶ್ರಾಂತ ಪ್ರಾಚಾರ್ಯ ಪ್ರೊ. ಮಲ್ಲಿಕಾರ್ಜುನ ಕಲಮರಹಳ್ಳಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಗಿರಿಜಾ ಅವರ ಸಾಹಿತ್ಯ ಸಂವೇದನೆ, ಬರಹದ ವ್ಯಾಪ್ತಿ, ವೈವಿಧ್ಯತೆ, ಸಮರ್ಪಣಾಭಾವಗಳ ಕುರಿತು ಅಭಿಮಾನದಿಂದ ಮಾತನಾಡಿದರು.
ಟಿ.ಗಿರಿಜಾ ಅವರ ಕುಟುಂಬದ ಪರವಾಗಿ ಗಿರಿಜಾ ಅವರ ಸಹೋದರಿ ಶ್ರೀಮತಿ ಟಿ. ಎಸ್. ಶೈಲಜ ತಮ್ಮ ಮನದ ಮಾತುಗಳಲ್ಲಿ, ಅವರಿಂದ ತಾವು ಕಲಿತ ಜೀವನ ಸ್ಫೂರ್ತಿ, ಮೌಲ್ಯಗಳ ಪಾಠ, ಬರಹದ ಆಸಕ್ತಿಗಳ ವಿಷಯವಾಗಿ ಹೆಮ್ಮೆಯಿಂದ ಹೇಳಿದರು.
ಕವಿಗೋಷ್ಠಿಯಲ್ಲಿ ಜಯಮ್ಮ ನೀಲಗುಂದ, ಭಾಗ್ಯಲಕ್ಷ್ಮಿ ಅಮೃತಾಪುರ, ವೀಣಾ ಕೃಷ್ಣಮೂರ್ತಿ, ಮಂಜುಳಾ ಸುನೀಲ್, ಸೀತಾ ಎಸ್ ನಾರಾಯಣ, ಸತ್ಯಭಾಮ ಮಂಜುನಾಥ್, ಓಂಕಾರಮ್ಮ ರುದ್ರಮುನಿಸ್ವಾಮಿ, ಕುಸುಮ ಲೋಕೇಶ್, ಸಾವಿತ್ರಿ ಜಗದೀಶ್, ಸಂಧ್ಯಾ ಸುರೇಶ್, ಎ. ಬಿ.ರುದ್ರಮ್ಮ, ಎಸ್. ಉಮಾದೇವಿ, ಡಾ.ರೂಪಶ್ರೀ ಶಶಿಕಾಂತ್, ಗಿರಿಜಾ ಸಿದ್ದಲಿಂಗಪ್ಪ, ಶೈಲಜಾ ಪಾಟೀಲ್, ಐ.ಕೆ. ಉಮಾದೇವಿ ಮತ್ತು ಇತರರು `ಕೊರೊನಾ-ಮಕ್ಕಳ ಭವಿಷ್ಯ’ ಮತ್ತು ‘ ಟಿ. ಗಿರಿಜಾ ವ್ಯಕ್ತಿತ್ವ- ಸಾಹಿತ್ಯ’ ವಿಷಯ – ಕೇಂದ್ರಿತವಾಗಿ ತಮ್ಮ ತಮ್ಮ ಕವನಗಳನ್ನು ವಾಚಿಸಿದರು.
ಕವಿಗೋಷ್ಠಿಯ ಬಗ್ಗೆ ಅರುಂಧತಿ ರಮೇಶ್ ಅವರು, ಇದು ಕವಿತೆಗಳ ಬಗ್ಗೆ ವಿಶ್ಲೇಷಣೆ ಮಾಡುವ ಸಮಯವಲ್ಲ, ಸ್ಮರಣೆಯನ್ನು ಹೃದಯ ತುಂಬಿ ಮಾಡಿರುವುದು ಮುಖ್ಯ ಎಂದು ತಮ್ಮ ಕವನ `ಗಿರಿಜಕ್ಕ ಹೀಗಾ’ ವಾಚನ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ವನಿತಾ ಸಾಹಿತ್ಯ ವೇದಿಕೆಯ ಅಧ್ಯಕ್ಷರಾದ ಶ್ರೀಮತಿ ಮಲ್ಲಮ್ಮ ನಾಗರಾಜ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಸತ್ಯಭಾಮ ಮಂಜು ನಾಥ್ ಸ್ವಾಗತಿಸಿದರು. ವೀಣಾ ಕೃಷ್ಣಮೂರ್ತಿ ಕಾರ್ಯಕ್ರಮ ನಿರೂಪಿಸಿದರು. ಕುಸುಮಾ ಲೋಕೇಶ್ ವಂದಿಸಿದರು.