ಕಿರಿಯ ವೈದ್ಯರ ಎಚ್ಚರಿಕೆ
ದಾವಣಗೆರೆ, ಜು. 20- ಶಿಷ್ಯವೇತನ ನೀಡುವ ಬಗ್ಗೆ ಮುಂದಿನ ಹತ್ತು ದಿನಗಳೊಳಗೆ ಲಿಖಿತ ಆದೇಶ ನೀಡದೇ ಇದ್ದರೆ ಅನಿವಾರ್ಯವಾಗಿ ಇದೇ ದಿನಾಂಕ 30 ರಿಂದ ಮುಷ್ಕರ ಮುಂದುವರೆಸುವುದಾಗಿ ಜೆ.ಜೆ.ಎಂ. ಮೆಡಿಕಲ್ ಕಾಲೇಜು ಸರ್ಕಾರಿ ಕೋಟಾದ ಸ್ನಾತಕೋತ್ತರ ಮತ್ತು ಗೃಹ ವೈದ್ಯರು ಹೇಳಿದ್ದಾರೆ.
ಇಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಡಾ.ರಾಹುಲ್, ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸರ್ಕಾರವೇ ಬಾಕಿ ಶಿಷ್ಯವೇತನ ಭರಿಸುವುದಾಗಿ ಮೌಖಿಕವಾಗಿ ಭರವಸೆ ನೀಡಿದೆ. ಆದರೆ ಈ ವರೆಗೂ ಯಾವುದೇ ರೀತಿಯ ಲಿಖಿತ ಆದೇಶ ನೀಡಿಲ್ಲ.
ಇತ್ತೀಚೆಗೆ ನಾವು ಕಾಲೇಜು ಆಡಳಿತ ಮಂಡಳಿಯ ಜಂಟಿ ಕಾರ್ಯದರ್ಶಿ ಶಾಮನೂರು ಮಲ್ಲಿಕಾರ್ಜನ್ ಅವರನ್ನು ಭೇಟಿ ಮಾಡಿದ್ದು, ಅವರೂ ಸಹ ಶಿಷ್ಯವೇತನ ನೀಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಲು 1 ವಾರ ಕಾಲಾವಕಾಶ ಕೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನಾವು 10 ದಿನಗಳ ಕಾಲ ಕಾದು ನೋಡುತ್ತೇವೆ. ಸರ್ಕಾರ ಹಾಗೂ ಆಡಳಿತ ಮಂಡಳಿಯಿಂದ ಲಿಖಿತ ಆದೇಶ ಬಾರದಿದ್ದಲ್ಲಿ ಮತ್ತೆ ಮುಷ್ಕರ ಮುಂದುವರೆಸುತ್ತೇವೆ ಎಂದು ಹೇಳಿದರು.
ಡಾ.ಮೇಘನ, ಡಾ.ಅಂಕಿತ್, ಡಾ.ನಿಧಿ ಪತ್ರಿಕಾಗೋಷ್ಠಿಯಲ್ಲಿದ್ದರು.