ದಾವಣಗೆರೆ,ಜು.20-ಸುಮಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನಗರದ ಅಶೋಕ ರಸ್ತೆಯ ರೈಲ್ವೆ ಗೇಟ್ ಸಮಸ್ಯೆಯನ್ನು ಬಗೆಹರಿಸದಿರುವ ಜನಪ್ರತಿನಿಧಿಗಳ ವರ್ತನೆ ಯನ್ನು ಸಾಮಾಜಿಕ ಸೇವಾ ಕಾರ್ಯಕರ್ತ ಜೆ. ಸೋಮನಾಥ್ ತೀವ್ರವಾಗಿ ಖಂಡಿಸಿದ್ದಾರೆ.
ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚಿಗೆ ಸ್ಥಳ ಪರಿಶೀಲನೆ ನಡೆಸಿದ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳು ಕೆಳ ಸೇತುವೆ ಮಾಡಲು ನಡೆಸಿರುವ ಯೋಜನೆಯನ್ನು ಆಕ್ಷೇಪಿಸಿರುವ ಅವರು, ಕೆಳಸೇತುವೆ ಬದಲಾಗಿ ಮೇಲ್ಸೇತುವೆ ನಿರ್ಮಿಸುವಂತೆ ಒತ್ತಾಯಿಸಿದ್ದಾರೆ.
ನಗರದಲ್ಲಿ ಈಗಾಗಲೇ ಎರಡು ಕೆಳ ಸೇತುವೆ ಗಳಿದ್ದು, ಇಲ್ಲಿ ಮಳೆ ಬಂದ ಸಂದರ್ಭದಲ್ಲಿ ಸಾಕಷ್ಟು ನೀರು ನಿಂತು ಸಾರ್ವಜನಿಕರು ಮತ್ತು ವಾಹನಗಳ ಓಡಾಟಕ್ಕೆ ತೊಂದರೆಯಾಗುತ್ತಿದೆ. ದಾವಣಗೆರೆ ಹಳೇ ಮತ್ತು ಹೊಸ ಭಾಗಗಳನ್ನು ಸಂಪರ್ಕಿಸುವ ಕೊಂಡಿಯಂತಿರುವ ಈ ಕೆಳ ಸೇತುವೆಗಳಿಂದ ಆಗಾಗ್ಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಜನರು ಬೇಸತ್ತಿದ್ದಾರೆ.
ಶ್ರೀ ಅಭಿನವ ರೇಣುಕ ಮಂದಿರ ಪಕ್ಕದ ಕೆಳ ಸೇತುವೆ ಅತ್ಯಂತ ಹಳೆಯದಾಗಿದ್ದು, ಇಲ್ಲಿನ ಅವ್ಯವಸ್ಥೆಯಂತೂ ಹೇಳತೀರದು. ಸಾಕಷ್ಟು ಬಾರಿ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಸಾರ್ವಜನಿಕರು ದೂರು ನೀಡಿದ್ದಲ್ಲದೇ, ಪತ್ರಿಕೆಗಳ ಮೂಲಕ ಗಮನ ಸೆಳೆದಿದ್ದರೂ ಸಮಸ್ಯೆಗಳ ಜೊತೆಗೆ ಮತ್ತಷ್ಟು ಸಮಸ್ಯೆಗಳು ಹೆಚ್ಚುತ್ತಲೇ ಇವೆ.
ಮಹಾನಗರ ಪಾಲಿಕೆ ಎದುರಿನ ಕೆಳ ಸೇತುವೆ ಕೂಡಾ ರೇಣುಕ ಮಂದಿರ ಪಕ್ಕದ ಕೆಳ ಸೇತುವೆಗಿಂತ ಭಿನ್ನವಾಗಿಲ್ಲ. ಇಲ್ಲೂ ಸಹ ಒಳ ಚರಂಡಿ ಮತ್ತು ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಿಲ್ಲ. ಬೀದಿ ದೀಪಗಳು ಕಾಣದಂತಾಗಿವೆ. ಇದರಿಂದಾಗಿ ನಾಗರಿಕರು ಯಾತನೆ ಪಡುವಂತಾಗಿದೆ.
ಈ ಹಿನ್ನೆಲೆಯಲ್ಲಿ ನಗರಕ್ಕೆ ಮತ್ತೊಂದು ಕೆಳ ಸೇತುವೆ ಬೇಕಾಗಿಲ್ಲ. ವರ್ತುಲ ರಸ್ತೆಯ ದೇವರಾಜ ಅರಸು ಬಡಾವಣೆ ಮತ್ತು ಎಪಿಎಂಸಿ ಯಾರ್ಡ್ ಬಳಿ ನೂತನವಾಗಿ ನಿರ್ಮಾಣವಾಗಿರುವ ಮೇಲ್ಸೇತುವೆ ಗಳು ಅಚ್ಚುಕಟ್ಟಾಗಿದ್ದು, ಅಶೋಕ ರಸ್ತೆ ರೈಲ್ವೆ ಗೇಟ್ ಸಮಸ್ಯೆ ಪರಿಹಾರಕ್ಕೂ ಸುಸಜ್ಜಿತವಾದ ಮೇಲ್ಸೇತುವೆ ನಿರ್ಮಿ ಸುವುದು ಸೂಕ್ತ ಎಂದು ಸೋಮಣ್ಣ ಸಲಹೆ ನೀಡಿದ್ದಾರೆ.