ಏಕ ರೂಪದ ಮಾರುಕಟ್ಟೆ ಶುಲ್ಕ ಜಾರಿಗೆ ಆಗ್ರಹ
ದಾವಣಗೆರೆ, ಜು.20- ಕೃಷಿ ಉತ್ಪನ್ನ ಮಾರುಕಟ್ಟೆಯ ಪ್ರಾಂಗಣದ ಒಳ ಹಾಗೂ ಹೊರಗೆ ಏಕ ರೂಪದ ಮಾರುಕಟ್ಟೆ ಶುಲ್ಕವನ್ನು ಜಾರಿಗೆ ತರುವಂತೆ ಆಗ್ರಹಿಸಿ ನಗರದ ಎಪಿಎಂಸಿ ದಲ್ಲಾಲರು ಇಂದಿನಿಂದ ಟೆಂಡರ್ ಪ್ರಕ್ರಿಯೆಯಿಂದ ದೂರ ಸರಿದು ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡಿದ್ದಾರೆ.
ಎಪಿಎಂಸಿಯ ದಲ್ಲಾಲರ ಸಂಘದ ನೇತೃತ್ವದಲ್ಲಿ ಎಪಿಎಂಸಿ ಕಚೇರಿ ಆವರಣದಲ್ಲಿ ಜಮಾಯಿಸಿದ್ದ ದಲ್ಲಾಲರು ಪ್ರತಿಭಟನೆ ನಡೆಸಿದರು. ಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕರುಗಳ ಮುಖೇನ ಮುಖ್ಯಮಂತ್ರಿಗಳು, ಸಂಬಂಧಿಸಿದ ಸಚಿವರು, ಇಲಾಖೆಗಳಿಗೆ ಮನವಿ ಸಲ್ಲಿಸಿದರು.
ರಾಜ್ಯ ಸರ್ಕಾರವು ಪ್ರತಿಶತ 1 ರೂ.ಗಳಿಗೆ ಮಾರುಕಟ್ಟೆ ಶುಲ್ಕವನ್ನು ವಿಧಿಸುವ ಮೂಲಕ ವರ್ತಕರ ಬಹು ವರ್ಷಗಳ ಬೇಡಿಕೆ ಈಡೇರಿಸಿರುವುದಕ್ಕೆ ಅಭಿನಂದಿಸುತ್ತೇವೆ. ಆದರೆ ಎಪಿಎಂಸಿ ಪ್ರಾಂಗಣದ ಹೊರಗೆ ಕೃಷಿ ಉತ್ಪನ್ನ ವ್ಯವಹಾರ ಮಾಡುವವರಿಗೆ ಎಪಿಎಂಸಿ ಶುಲ್ಕ ಇರುವುದಿಲ್ಲ ಎನ್ನುವ ಅಂಶ ನ್ಯಾಯ ಯುತವಾಗಿ ವ್ಯವಹಾರ ನಡೆಸುವ ನಮಗೆ ನಿರಾಸೆ ಮೂಡಿಸಿದೆ ಎಂದು ದಲ್ಲಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾನೂನು ನಿಯಮಗಳು ಎಲ್ಲರಿಗೂ ಒಂದೇ ಇರಬೇಕು ಎನ್ನುವುದು ಸಂವಿಧಾನ ಬದ್ದವಾಗಿರುತ್ತದೆ. ಪ್ರಾಂಗಣದಲ್ಲಿನ ವರ್ತಕರು ಪ್ರಾಂಗಣದ ಹೊರಗಿನ ವರ್ತಕರೊಂದಿಗೆ ಪೈಪೋಟಿ ನಡೆಸಲಾಗದೇ ವಹಿವಾಟು ಸ್ಥಗಿತಗೊಳಿಸುವ ಸ್ಥಿತಿ ಬಂದಿದೆ. ಪ್ರಾಂಗಣದಲ್ಲಿ ಈಗಾಗಲೇ ಮೂಲ ಸೌಕರ್ಯಗಳನ್ನು ಒದಗಿಸಿಕೊಂಡು ಕಾರ್ಯ ನಿರ್ವಹಿಸುತ್ತಿದ್ದು, ಈ ಕಾಯ್ದೆ ತಿದ್ದುಪಡಿಯಿಂದ ಗುಮಾಸ್ತರು ಹಾಗೂ ಹಮಾಲರು ಸಹ ಕೆಲಸ ಕಳೆದುಕೊಳ್ಳಬೇಕಾಗುತ್ತದೆ ಹಾಗೂ ಪ್ರಾಂಗಣದಲ್ಲಿ ಗೋದಾಮು, ಮಳಿಗೆಗಳನ್ನು ನಿರ್ಮಿಸಲು ಸಾಲ, ಬಡ್ಡಿ ಮೇಲೆ ಹಣ ಪಡೆದು ಬಂಡವಾಳ ಹೂಡಿದ್ದು, ಮರುಪಾವತಿ ಮಾಡಲು ಈ ಕಾಯ್ದೆಯಿಂದ ತುಂಬಾ ತೊಂದರೆಯುಂಟಾಗಿದೆ ಎಂದು ಅಳಲಿಟ್ಟಿದ್ದಾರೆ.
ಪ್ರಾಂಗಣದಲ್ಲಿನ ನಮ್ಮ ವ್ಯವಹಾರಗಳನ್ನು ಸ್ಥಗಿತಗೊಳಿಸಿ ಅನಿವಾರ್ಯವಾಗಿ ಪ್ರಾಂಗಣದ ಹೊರಗೆ ಹೋಗಬೇಕಾಗಿರುವ ಪರಿಸ್ಥಿತಿ ಬಂದಿದೆ. ಇದರಿಂದ ರೈತರಿಗೆ ಸ್ಪರ್ಧಾತ್ಮಕ ಬೆಲೆ ದೊರಕದೇ ಯಾರೋ ಒಬ್ಬರು ನಿಗದಿಪಡಿಸಿದ ಕನಿಷ್ಟ ಬೆಲೆ ದೊರೆತು ರೈತರು ಅಧೋಗತಿಗೆ ತಲುಪುವುದು ಸತ್ಯ ಹಾಗೂ ಸರ್ಕಾರಕ್ಕೆ ತುಂಬಲಾರದಂತಹ ನಷ್ಟ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪ್ರಾಂಗಣದ ಒಳಗೆ ಹಾಗೂ ಪ್ರಾಂಗಣದ ಹೊರಗೆ ಏಕರೂಪದ ಮಾರುಕಟ್ಟೆ ಶುಲ್ಕದ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಏಕರೂಪದ ಮಾರುಕಟ್ಟೆ ಶುಲ್ಕದ ವ್ಯವಸ್ಥೆಯನ್ನು ಜಾರಿಗೆ ತರುವವರೆಗೆ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಂಡು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸುವುದಿಲ್ಲ ಎಂದು ದಲ್ಲಾಲರು ಬಿಗಿಪಟ್ಟು ಹಿಡಿದಿದ್ದಾರೆ.
ಪ್ರತಿಭಟನೆಯಲ್ಲಿ ಸಂಘದ ಅಧ್ಯಕ್ಷ ಜಿ.ಎಸ್. ಪರಮೇಶ್ವರ ಗೌಡರು, ಕಾರ್ಯದರ್ಶಿ ಬಿ.ಎನ್.ಟಿ. ಸದಾನಂದ್, ಎಸ್.ಟಿ. ಕುಸುಮಶೆಟ್ಟಿ, ಮಾಗಾನಹಳ್ಳಿ ಸೋಮಶೇಖರ್, ದೊಗ್ಗಳ್ಳಿ ಬಸವರಾಜಪ್ಪ, ಡಿ. ಸುರೇಂದ್ರಪ್ಪ, ಕೆ.ಜಿ.ಕೆ. ಬಸವರಾಜು, ಕುಂದವಾಡ ಜಗದೀಶ್, ಮಾಗಾನಹಳ್ಳಿ ಸೋಮಶೇಖರ್, ಚರಲಿಂಗಯ್ಯ, ಆರ್. ಜಯಣ್ಣ, ಕೆ. ಸಿದ್ದೇಶ್, ಬಿ.ಜಿ.ಆರ್. ಹಾಲೇಶ್, ಪಲ್ಲಾಗಟ್ಟೆ ಮಂಜುನಾಥ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.