ದೀಪ, ಶ್ರೀಮಂತರ ಮನೆಯಲ್ಲಿ ಕೊಡುವಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ

ದೀಪ, ಶ್ರೀಮಂತರ ಮನೆಯಲ್ಲಿ ಕೊಡುವಷ್ಟೇ ಬೆಳಕನ್ನು ಬಡವನ ಮನೆಯಲ್ಲೂ ಕೊಡುತ್ತದೆ - Janathavaniರಂಭಾಪುರಿ ಜಗದ್ಗುರುಗಳ ವಿಶ್ಲೇಷಣೆ

ರಂಭಾಪುರಿ ಪೀಠ (ಬಾಳೆಹೊನ್ನೂರು), ಅ.23- ಅನಾರೋಗ್ಯಕರ ಸಮಾಜಕ್ಕೆ ಅಡಿಗಲ್ಲನ್ನು ಇಡುವ ಜನ ಹೆಚ್ಚಾಗುತ್ತಿದ್ದಾರೆ. ಸ್ವಾರ್ಥಕ್ಕಾಗಿ ಆದರ್ಶ ಮೌಲ್ಯಗಳನ್ನು ನಾಶ ಮಾಡುವ ಜನರಿದ್ದಾರೆ. ಇಂತವರನ್ನು ನಿರ್ಲಕ್ಷಿಸಿ, ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವ ಅವಶ್ಯಕತೆ ಇದೆ ಎಂದು ಶ್ರೀ ರಂಭಾಪುರಿ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.

ಶ್ರೀ ರಂಭಾಪುರಿ ಪೀಠದಲ್ಲಿ ನಡೆಯುತ್ತಿರುವ 29ನೇ ವರ್ಷದ ಸಾಂಪ್ರದಾಯಿಕ ಸರಳ ಶರನ್ನವರಾತ್ರಿ ಆಚರಣೆಯ 7ನೇ ದಿನವಾದ ಇಂಂದಿನ ಸಮಾರಂಭದ ಸಾನ್ನಿಧ್ಯ ವಹಿಸಿ ಜಗದ್ಗುರುಗಳು ಆಶೀರ್ವಚನ ನೀಡುತ್ತಿದ್ದರು.

ಮನುಷ್ಯನಿಗೆ ಅಧಿಕಾರ, ಸಂಪತ್ತಿನ ಮತ್ತು ಕೀರ್ತಿ ವಾರ್ತೆಗಳ ಹುಚ್ಚು ಹತ್ತಿದೆ. ಅಂತರಂಗದ ಬೆಳಕಿಗಿಂತ ಬಹಿರಂಗದ ಬೆಳಕೇ ಹೆಚ್ಚೆಂದು ತಿಳಿಯುತ್ತಾರೆ. ಹೊನ್ನು, ಹೆಣ್ಣು, ಮಣ್ಣಿಗಾಗಿ ಮಡಿದವರು ಬಹಳಷ್ಟು ಜನ. ಆದರೆ, ದೇವರಿಗಾಗಿ ಸತ್ತವರಾರಿಲ್ಲ. ಭೌತಿಕ ಸಂಪನ್ಮೂಲ ಇದ್ದವರೆಲ್ಲರೂ ಕಾಲಗರ್ಭದಲ್ಲಿ ಕಣ್ಮರೆಯಾದರು. ಜನತೆಗೆ ಬೆಳಕು ತೋರಿದ ಮಹಾನುಭಾವರ ಸಂದೇಶದ ಮಾತು ಗಳನ್ನು ಯಾರೂ ಮರೆತಿಲ್ಲ. ಮನುಷ್ಯನಲ್ಲಿರುವ ಅಜ್ಞಾನ ಎಂಬ ಕತ್ತಲೆಯನ್ನು ಕಳೆದು, ಜ್ಞಾನದ ಬೆಳಕು ತೋರಬಲ್ಲಾತನೇ ನಿಜವಾದ ಗುರು. ದುಡ್ಡಿಲ್ಲದವ ಬಡವನಲ್ಲ. ಬದುಕಿಗೊಂದು ಗುರಿ ಮತ್ತು ಗುರು ಇಲ್ಲದವನು ನಿಜವಾದ ಬಡವ. ತುಕ್ಕು ಹಿಡಿದ ಕಬ್ಬಿಣದಂತೆ ನಶಿಸಿ ಹೋಗಬೇಡ. ತೇದ ಗಂಧ ಸೂಸಿಸುವ ಪರಿಮಳದಂತೆ ಬಾಳಿ ಬದುಕಬೇಕು. ಕಲ್ಲು ಹೃದಯದವರನ್ನು ಬದಲಿಸಬಹುದು. ಆದರೆ, ಕೊಳಕು ಮನಸ್ಸು ಇರುವವರನ್ನು ಬದಲಿಸುವುದು ಬಹಳ ಕಷ್ಟದ ಕೆಲಸ. ದೀಪ ಶ್ರೀಮಂತರ ಮನೆಯಲ್ಲಿ ಎಷ್ಟು ಬೆಳಕು ಕೊಡುತ್ತೋ ಅಷ್ಟೇ ಬೆಳಕು ಬಡವನ ಮನೆಯಲ್ಲಿ ಕೊಡುತ್ತದೆ. ಅದರಂತೆ ಶ್ರೀ ಗುರು ಬಡವ, ಬಲ್ಲಿದ ಭೇದ ಮಾಡದೇ ಬಾಗಿ ಬಂದ ಭಕ್ತನಿಗೆ ಹೃದಯ ತುಂಬಿ ಸನ್ಮಾರ್ಗ ತೋರಿ ಮುನ್ನಡೆಸುತ್ತಾನೆ ಎಂದು ವಿಶ್ಲೇಷಿಸಿದರು. 

ನವರಾತ್ರಿಯ 7ನೇ ದಿನದಂದು ಆದಿ ಶಕ್ತಿ ಜಗನ್ಮಾತೆಯನ್ನು ಕಾಳರಾತ್ರಿ ರೂಪದಲ್ಲಿ ಪೂಜಿಸುತ್ತಾರೆ. ಈ ದೇವಿಗೆ ಬೆಲ್ಲ ಇಷ್ಟವಾದ ನೈವೇದ್ಯ. ದುಷ್ಟ ಶಕ್ತಿಗಳನ್ನು ನಿರ್ನಾಮ ಮಾಡಿ, ಸಾತ್ವಿಕ ಶಕ್ತಿ ಬೆಳೆಸುವುದೇ ಕಾಳರಾತ್ರಿ ದೇವಿಯ ಗುರಿ. ಇಂದು ಎಲ್ಲೆಡೆ ಹೆಚ್ಚುತ್ತಿರುವ ದುಷ್ಟರ ದರ್ಪ ಅಡಗಿಸಿ, ಸಜ್ಜನರನ್ನು ಕಾಪಾಡಬೇಕೆಂದು ನಾವೆಲ್ಲ ಪ್ರಾರ್ಥಿಸೋಣ ಎಂದರು. 

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಅಥಣಿಯ ಮಾನವ ಕಂಪ್ಯೂಟರ್ ಬಸವರಾಜ ಉಮ್ರಾಣಿ ಮಾತನಾಡಿ, ವಿಜ್ಞಾನವನ್ನು ಸರಿಯಾಗಿ ಬಳಸಿಕೊಂಡರೆ ಈ ದೇಶವನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಸಾಧ್ಯವಿದೆ. ಜನ ಹಿತಾತ್ಮಕವಾದ ವಿಜ್ಞಾನವನ್ನು ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಶ್ರಮಿಸಬೇಕಾಗಿದೆ ಎಂದರು. 

ಬಾಲ ಪ್ರತಿಭೆ ಶಿವಯೋಗಿ ಪೂಜಾರ್‌ ಮಾತನಾಡಿ, ಮಾನವ ಜೀವನದ ಉಜ್ವಲತೆಗೆ ಧರ್ಮ ದಿಕ್ಸೂಚಿಯಾಗಿದೆ ಎಂದರು. ಅ.ಭಾ.ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಹೆಚ್.ಎಂ.ಲೋಕೇಶ್‌ ಪಾಲ್ಗೊಂಡಿದ್ದರು.

ಹುಬ್ಬಳ್ಳಿಯಿಂದ ಪ್ರಕಟಗೊಳ್ಳುತ್ತಿರುವ ಎಂ.ಎಂ.ಕನಕೇರಿ ಅವರ `ಸುಶೀಲ’ ಪತ್ರಿಕೆಯ ಸುವರ್ಣ ಮಹೋತ್ಸವದ ಸ್ಮರಣ ಸಂಚಿಕೆಯನ್ನು  ರಂಭಾಪುರಿ ಜಗದ್ಗುರುಗಳು ಬಿಡುಗಡೆ ಮಾಡಿದರು.

ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷರೂ, ಮುಕ್ತಿಮಂದಿರದ ಪಟ್ಟಾಧ್ಯಕ್ಷರೂ ಆದ ಶ್ರೀ ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ ನೇತೃತ್ವ ವಹಿಸಿದ್ದರು. 

ಸಮಾರಂಭದಲ್ಲಿ ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯರು,  ಮಳಲಿ ಸಂಸ್ಥಾನ ಮಠದ ಡಾ. ನಾಗಭೂಷಣ ಶಿವಾಚಾರ್ಯರು, ಸಂಗೊಳ್ಳಿ ಹಿರೇಮಠದ ಶ್ರೀ ಗುರುಲಿಂಗ ಶಿವಾಚಾರ್ಯರು, ಬೇರುಗಂಡಿ ಬೃಹನ್ಮಠದ ಶ್ರೀ ರೇಣುಕ ಮಹಾಂತ ಶಿವಾಚಾರ್ಯರು ಕಲಾದಗಿ ಪಂಚಗೃಹ ಹಿರೇಮಠದ ಗಂಗಾಧರ ಶಿವಾಚಾರ್ಯರು, ಎಸಳೂರು ತೆಂಕಲಗೋಡು ಮಠದ ಚನ್ನಸಿದ್ಧೇಶ್ವರ ಶಿವಾಚಾರ್ಯರು ಪಾಲ್ಗೊಂಡಿದ್ದರು.

ಚಿಕ್ಕಮಗಳೂರಿನ ಶ್ರೀ ಜಗದ್ಗುರು ರೇಣುಕಾಚಾರ್ಯ ಮಹಿಳಾ ಮಂಡಳಿ ಸದಸ್ಯರು ಪ್ರಾರ್ಥನೆ ಸಲ್ಲಿಸಿದರು. ಲಾವಣ್ಯ ಬಿ.ಕೆ. ಸ್ವಾಗತಿಸಿದರು. ಶಿವಮೊಗ್ಗದ ಶಾಂತಾ ಆನಂದ ನಿರೂಪಿಸಿದರು.

error: Content is protected !!