ದಾವಣಗೆರೆ,ಜು.18-ಕೃಷಿ ಉತ್ಪನ್ನ ಮಾರುಕಟ್ಟೆಯ ಶುಲ್ಕವನ್ನು ಕೇಂದ್ರ ಸರ್ಕಾರದಂತೆ ರಾಜ್ಯ ಸರ್ಕಾರದಲ್ಲಿಯೂ ಮಾಡುವಂತೆ ದಾವಣಗೆರೆ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧ್ಯಕ್ಷರೂ ಆಗಿರುವ ಮಾಜಿ ಶಾಸಕ ಯಜಮಾನ್ ಮೋತಿ ವೀರಣ್ಣ, ಕಾರ್ಯದರ್ಶಿ ಅಜ್ಜಂಪುರ ಶೆಟ್ರು ಶಂಭುಲಿಂಗಪ್ಪ ಅವರುಗಳು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.
ಕೇಂದ್ರ ಸರ್ಕಾರವು ಮಾರುಕಟ್ಚೆ ಶುಲ್ಕವನ್ನು ಯಾವುದೇ ರೀತಿಯಲ್ಲಿಯೂ ಆಕರಿಸಿದಂತೆ ಸುಗ್ರೀವಾಜ್ಞೆ ಮಾಡಿದೆ.
ಇದರಂತೆ ಕೃಷಿ ಉತ್ಪನ್ನವನ್ನು ಮಾರುವ ರೈತ ಹಾಗೂ ಕೊಳ್ಳುವ ವ್ಯಾಪಾರಸ್ಥರು ಮತ್ತು ಗ್ರಾಹಕರು ಮಾರುಕಟ್ಟೆ ಏರಿಯಾದಲ್ಲಿ ತಮ್ಮ ಸರಕುಗಳನ್ನು ಮುಕ್ತವಾಗಿ ವ್ಯವಹರಿಸುವುದು ಮತ್ತು ಸಾಗಾಣಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಆದರೆ, ಕರ್ನಾಟಕ ರಾಜ್ಯ ಸರ್ಕಾರವು ಶೇ.1ರಂತೆ ಮಾರುಕಟ್ಟೆ ಶುಲ್ಕವನ್ನು ಮಾರ್ಕೆಟ್ ಪ್ರಾಂಗಣದಲ್ಲಿ ಆಕರಿಸುವಂತೆ ಆದೇಶಿಸಿರುವುದು ಸಮಂಜಸವಲ್ಲ.
ಇದರಿಂದ ಮಾರುಕಟ್ಟೆ ಯಾರ್ಡಿನ ಒಳಗಡೆ ಮುಕ್ತವಾಗಿ ಮಾರುವವರು ಮತ್ತು ಖರೀದಿಸುವವರಿಗೆ ವ್ಯವಹರಿಸಲು ಸಾಧ್ಯವಾಗದೇ ತೊಂದರೆಯಾಗುತ್ತದೆ. ಕಾರಣ, ಒಳಗಡೆ ವ್ಯವಹರಿ ಸುವವರು ಮಾರುಕಟ್ಟೆ ಶುಲ್ಕವನ್ನು ಪಾವತಿಸ ಬೇಕೆಂಬ ಆಜ್ಞೆಯಿಂದ ಮಾಲಿನ ಬೆಲೆಯನ್ನು ಹೊರಗೆ ಕೊಳ್ಳುವವರ ಜೊತೆ ಸ್ಪರ್ಧಾತ್ಮಕವಾಗಿ ವ್ಯವಹರಿಸುವುದು ತುಂಬಾ ಕಷ್ಟ. ಇದರಿಂದ ಒಳಗೆ ಖರೀದಿಸುವವರು ನಷ್ಟಕ್ಕೆ ಗುರಿಯಾಗುವುದಲ್ಲದೇ ಸ್ಪರ್ಧೆಯನ್ನು ಎದುರಿಸಬೇಕಾಗುತ್ತದೆ.
ಹೊರಗಿನವರು ಯಾವುದೇ ರೀತಿಯ ಅಡಚಣೆ ಯಿಲ್ಲದೇ, ಸುಲಲಿತವಾಗಿ ವ್ಯಾಪಾರ ಮಾಡಬಹುದು.
ಈ ಹಿನ್ನೆಲೆಯಲ್ಲಿ ಮಾರುಕಟ್ಟೆ ಶುಲ್ಕದ ತಾರತಮ್ಯವು ಒಳಗಡೆ ಮಾರುವವರಿಗೆ ಮಾರಕವಾಗಬಾರದು.
ಹೊರಗೆ ಮಾರುವವರಂತೆಯೇ ಒಳಗಿನವರಿಗೂ ಸುಲಲಿತ ವ್ಯವಹಾರ ಮಾಡಲು ಅವಕಾಶ ನೀಡಬೇಕೆಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ, ಅಕ್ಕಿ – ಗಿರಣಿ, ದಲ್ಲಾಲರ ಸಂಘ ಮತ್ತು ಇತರೆ ಸಂಘ-ಸಂಸ್ಥೆಗಳು ಸರ್ಕಾರವನ್ನು ಒತ್ತಾಯಿಸಿವೆ.