ದಾವಣಗೆರೆ, ಅ.22 – ಇದೇ ಅಕ್ಟೋಬರ್ ಹತ್ತರ ಶನಿವಾರ ನಡೆದ `ಕ್ಯಾನ್ಸರ್ ನಡೆ-ಕೋವಿಡ್ ತಡೆ’ ಪರೋಕ್ಷ ಅಭಿಯಾನದಲ್ಲಿ ಭಾಗವಹಿಸಿದ್ದವರು ಸಲ್ಲಿಸಿದ್ದ ವಿಡಿಯೋಗಳಲ್ಲಿ ಅತ್ಯುತ್ತಮ ವಿಡಿಯೋಗಳನ್ನು ಆಯ್ಕೆ ಮಾಡಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.
ದಾವಣಗೆರೆಯಲ್ಲದೇ, ದುಬೈ, ಮುಂಬೈ, ಬೆಂಗಳೂರು, ಚಿತ್ರದುರ್ಗ, ಸೋಮವಾರಪೇಟೆ ಹಾಗೂ ಅಮೆರಿಕಾದಿಂದ ಆಸಕ್ತರು ಈ ಜಾಗೃತಿ ಅಭಿಯಾನದಲ್ಲಿ ತಮ್ಮ ಅನುಕೂಲಕರ ಸ್ಥಳಗಳಿಂದ ಭಾಗವಹಿಸಿದ್ದರು. ಬಹುತೇಕರು ತಾವು ವಾಕ್ ಮಾಡಿದ ವಿಡಿಯೋಗಳನ್ನು ಸ್ಫೂರ್ತಿದಾಯಕ ಸಂದೇಶಗಳೊಂದಿಗೆ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ಗೆ ಸಲ್ಲಿಸಿದ್ದರು. ಅವುಗಳನ್ನು ಪರಿಷ್ಕರಿಸಿದ ತೀರ್ಪುಗಾರರ ತಂಡ ಹತ್ತು ಅತ್ಯುತ್ತಮ ವೈಯಕ್ತಿಕ ಹಾಗೂ ನಾಲ್ಕು ಅತ್ಯುತ್ತಮಮ ಸಾಮೂಹಿಕ ವಿಡಿಯೋಗಳನ್ನು ಆಯ್ಕೆ ಮಾಡಿದೆ. ವೈಯಕ್ತಿಕ ವಿಡಿಯೋ ವಿಭಾಗದಲ್ಲಿ ದುಬೈನ ಗುರು ಪ್ರಶಾಂತ್, ಚಿತ್ರದುರ್ಗದ ಎ.ಆರ್. ಲಕ್ಷ್ಮಣ್, ಜ್ಯೋತಿ ಲಕ್ಷ್ಮಣ್, ದಾವಣಗೆರೆಯ ಫೇರಿ, ಡಾ. ನವೀನ್, ಪದ್ಮಶ್ರೀ, ಡಾ.ದೀಪಕ್, ವಿವೇಕಾನಂದ್, ಡಾ. ಭಾನು, ಹರ್ಷಾ ನಾಗರಾಜ್ ಪ್ರಶಸ್ತಿ ಪಡೆದಿದ್ದಾರೆ. ಸಾಮೂಹಿಕ ವಿಡಿಯೋಗಳಲ್ಲಿ ಬನ್ನಿಕೋಡು ಗ್ರಾಮದ ಸರಕಾರಿ ಶಾಲೆಯ ಶಿಕ್ಷಕಿ ಬಿ.ಸಿ. ಮೀನಾಕ್ಷಿ ಮತ್ತು ಸಹಪಾಠಿಗಳ ತಂಡ, ಬೆಂಗಳೂರಿನ ಜಿ.ಕೆ.ವಿ.ಕೆ ಲೇಔಟ್ ವಾಕಿಂಗ್ ಗ್ರೂಪ್, ದುಬೈನ ಕನ್ನಡ ಬಳಗ ಮತ್ತು ಷಾರ್ಜಾದ ಎಚ್.ಎಚ್.ಬೆಲಗೂರು ಮತ್ತು ಕುಟುಂಬ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ದಾವಣಗೆರೆಯ ಮೂರು ವರ್ಷದ ಬಾಲಕಿ ಸಿ. ವನಿಶಾ ಈಕೆಯ ವಿಡಿಯೋ ಇಂಡಿಯನ್ ರೆಡ್ ಕ್ರಾಸ್‍ನ ವಿಶೇಷ ಪ್ರಶಸ್ತಿಗೆ ಆಯ್ಕೆಯಾಗಿದೆ. ಈ ಅಭಿಯಾನದ ಸಂಘಟಕರಲ್ಲಿ ಒಬ್ಬರಾಗಿದ್ದ `ಲೈಫ್ ಲೈನ್’ ಸ್ವಯಂ ಪ್ರೇರಿತ ರಕ್ತ ದಾನಿಗಳ ಸಮೂಹ ಇವರ ವಿಡಿಯೋ ಪ್ರಶಂಸೆಗೆ ಪಾತ್ರವಾಗಿದೆ.
ಈ ಕೋವಿಡ್ ಸಂದರ್ಭದಲ್ಲಿ ಕ್ಯಾನ್ಸರ್ ನಡೆ…. ಪರೋಕ್ಷ ಅಭಿಯಾನಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆ ಹಲವು ಸಂಘ-ಸಂಸ್ಥೆಗಳಿಗೆ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸಾಹ ಮೂಡಿಸಿದೆ. ಕೇವಲ ಮೂರು ವರ್ಷದ ಬಾಲಕಿಯಿಂದ ಹಿಡಿದು ಎಂಬತ್ತೆರಡು ವರ್ಷದ ವೃದ್ಧರು ಭಾಗವಹಿಸಿದ್ದು ಈ ಅಭಿಯಾನವನ್ನು ಅರ್ಥಪೂರ್ಣವಾಗಿಸಿದೆ ಎಂದಿರುವ ದಾವಣಗೆರೆ ಕ್ಯಾನ್ಸರ್ ಫೌಂಡೇಶನ್ ರಾಯಭಾರಿ, ಕಲಾವಿದ ಆರ್.ಟಿ. ಅರುಣ್ ಕುಮಾರ್ `ಆರೋಗ್ಯವೇ ಭಾಗ್ಯ’ ಎಂಬ ಜಾಗೃತಿ ಎಲ್ಲೆಡೆ ಮೂಡಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.